HEALTH TIPS

'ಡಿಜಿಟಲ್‌ ಇಂಡಿಯಾ'ಕ್ಕೆ ಜಿಯೊ ಹೆಬ್ಬಾಗಿಲು

 ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಒಡೆತನದ ಜಿಯೊ ಪ್ಲ್ಯಾಟ್‌ಫಾರ್ಮ್ಸ್‌ ಕಂಪನಿಯು ದೇಶದ ಡಿಜಿಟಲ್‌ ನೆಟ್‌ವರ್ಕ್ಸ್‌ ಮಾರುಕಟ್ಟೆ ಪ್ರವೇಶಿಸಿ ಹತ್ತು ವರ್ಷ ಪೂರೈಸಿದ್ದು, ಅದರ ಅಪ್ಲಿಕೇಷನ್‌ಗಳು ಕೇಂದ್ರ ಸರ್ಕಾರದ 'ಡಿಜಿಟಲ್‌ ಇಂಡಿಯಾ'ದ ಆಶಯಕ್ಕೆ ಹೆಬ್ಬಾಗಿಲಾಗಿವೆ. 


ಜಿಯೊ ಸೇವೆ ಪ್ರಾರಂಭವಾಗಿದ್ದು, 2016ರ ಸೆಪ್ಟೆಂಬರ್‌ನಲ್ಲಿ. ಮೊಬೈಲ್‌ ಡೇಟಾ ಬಳಕೆಯು ದುಬಾರಿಯಾಗಿದ್ದ ಸಂದರ್ಭದಲ್ಲಿ ಮಾರುಕಟ್ಟೆಗೆ ಹೆಜ್ಜೆ ಇಟ್ಟ ಜಿಯೊ, ದಶಕದ ಅವಧಿಯಲ್ಲಿ ದೇಶದ ಡಿಜಿಟಲ್‌ ಲೋಕದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆದಿದೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮೊಬೈಲ್‌ ಡೇಟಾ ಒದಗಿಸಿದೆ. ಪ್ರಸ್ತುತ ದೇಶದಲ್ಲಿ 52 ಕೋಟಿಗೂ ಹೆಚ್ಚು ಗ್ರಾಹಕರಿಗೆ ಸೇವೆ ಒದಗಿಸಲಾಗುತ್ತಿದೆ. ಜಿಯೊದ ಮೊಬೈಲ್ ಗ್ರಾಹಕರಲ್ಲಿ ಅರ್ಧದಷ್ಟು ಬಳಕೆದಾರರು 18ರಿಂದ 35 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಕಂಪನಿ ತಿಳಿಸಿದೆ.

ಮನರಂಜನೆ, ಕ್ಲೌಡ್ ಸ್ಟೋರೇಜ್, ಕಂಪ್ಯೂಟಿಂಗ್, ಎಂಟರ್‌ಪ್ರೈಸಸ್‌ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸೇವೆ ವಿಸ್ತರಿಸಲಾಗಿದೆ. ಪ್ರತಿಯೊಬ್ಬ ಭಾರತೀಯನಿಗೂ 'ಡಿಜಿಟಲ್‌ ಇಂಡಿಯಾ'ದ ಸೇವೆ ಲಭ್ಯವಾಗುವಂತೆ ಮಾಡುವುದೇ ಕಂಪನಿಯ ಗುರಿಯಾಗಿದೆ ಎಂದು ಹೇಳಿದೆ.

ಕಂಪನಿಯು ಮಾರುಕಟ್ಟೆ ಪ್ರವೇಶಿಸುವುದಕ್ಕೂ ಮೊದಲು ಮೊಬೈಲ್‌ ಕರೆ, ಡೇಟಾ ಮತ್ತು ಹೆಚ್ಚುವರಿ ಸೇವೆಗಳಿಗೆ ಗ್ರಾಹಕರು ದುಬಾರಿ ಶುಲ್ಕ ಭರಿಸಬೇಕಿತ್ತು. ಜಿಯೊ ಪ್ರಾರಂಭವಾದಾಗ ಒಂದು ಗಿಗಾಬೈಟ್ ಡೇಟಾದ ಬೆಲೆ ಸುಮಾರು ₹228 ಇತ್ತು. ಪ್ರಸ್ತುತ ₹8ಕ್ಕಿಂತ ಕಡಿಮೆ ಇದೆ. ಜೊತೆಗೆ, ದೇಶದಲ್ಲಿ ಸರಾಸರಿ ಡೌನ್‌ಲೋಡ್ ವೇಗವು 2.5 ಎಂಬಿಪಿಎಸ್‌ನಿಂದ 68 ಎಂಬಿಪಿಎಸ್‌ಗೆ ಹೆಚ್ಚಾಗಿದೆ ಎಂದು ವಿವರಿಸಿದೆ.

2025-26ನೇ ಆರ್ಥಿಕ ವರ್ಷದಲ್ಲಿ ದೇಶದ ವೈರ್‌ಲೆಸ್ ಡೇಟಾ ಬಳಕೆಯ ಪೈಕಿ ಜಿಯೊ ಪಾಲು ಶೇ 60ರಷ್ಟಿದೆ. ಈ ಪೈಕಿ ಶೇ 46ರಷ್ಟು ಪಾಲು ಗ್ರಾಮೀಣ ಪ್ರದೇಶದ್ದಾಗಿದೆ ಎಂದು ಹೇಳಿದೆ.

ಜಿಯೊಫೈಬರ್‌ನಡಿ 2019ರಲ್ಲಿ ಮನೆಗಳಿಗೆ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆ ಆರಂಭಿಸಲಾಯಿತು. 2024ರಲ್ಲಿ ಜಿಯೊ ಏರ್‌ಫೈಬರ್ ಪ್ರಾರಂಭಗೊಂಡಿತು. ಪ್ರಸಕ್ತ ವರ್ಷದ ಮಾರ್ಚ್‌ ಅಂತ್ಯಕ್ಕೆ 27 ಮಿಲಿಯನ್ ಮನೆಗಳು ಜಿಯೊ ಬ್ರಾಡ್‌ಬ್ಯಾಂಡ್ ಸೇವೆ ಪಡೆದಿವೆ. ಇದರಲ್ಲಿ ಸುಮಾರು 13 ಮಿಲಿಯನ್ ಗ್ರಾಹಕರು ಜಿಯೊ ಏರ್‌ಫೈಬರ್ ಸೇವೆ ಪಡೆದಿದ್ದಾರೆ. ಪ್ರಸ್ತುತ ಕಂಪನಿಯು ದೇಶದ ಅತಿದೊಡ್ಡ ಸ್ಥಿರ ಬ್ರಾಡ್‌ಬ್ಯಾಂಡ್ ಪೂರೈಕೆದಾರನಾಗಿದೆ. ದೇಶದ ಹೊಸ ಸ್ಥಿರ ಬ್ರಾಡ್‌ಬ್ಯಾಂಡ್ ಸಂಪರ್ಕಗಳಲ್ಲಿ ಮೂರನೇ ಎರಡರಷ್ಟು ಪಾಲು ಹೊಂದಿದೆ ಎಂದು ವಿವರಿಸಿದೆ.

ಜಿಯೊ ಸೆಟ್‌ಟಾಪ್ ಬಾಕ್ಸ್ ಮನರಂಜನೆ, ಗೇಮಿಂಗ್ ಕನ್ಸೋಲ್ ಮತ್ತು ಕಂಪ್ಯೂಟರ್ ಆಗಿ ಪರಿವರ್ತಿಸುತ್ತದೆ. ಜಿಯೊಟಿವಿ+ ಒಂದೇ ಪರದೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಡಿಜಿಟಲ್ ಚಾನೆಲ್‌ಗಳು ಮತ್ತು 15 ಸ್ಟ್ರೀಮಿಂಗ್ ಸೇವೆ ನೀಡುತ್ತಿದೆ. ಎರಡು ವರ್ಷದ ಹಿಂದೆ ಪ್ರಾರಂಭವಾದ ಜಿಯೊ ಎಐಕ್ಲೌಡ್ ಛಾಯಾಚಿತ್ರಗಳು, ವಿಡಿಯೊಗಳು ಮತ್ತು ದಾಖಲೆಗಳನ್ನು ಸಂಗ್ರಹಿಸಲು ನೆರವಾಗಿದೆ. ಜಿಯೊಸಾವನ್‌ 16 ಭಾಷೆಗಳಲ್ಲಿ 100 ಮಿಲಿಯನ್‌ಗಿಂತಲೂ ಹೆಚ್ಚು ಹಾಡುಗಳಿಗೆ ವೇದಿಕೆ ಒದಗಿಸಿದೆ. ಲಕ್ಷಾಂತರ ಗ್ರಾಹಕರಿಗೆ ಸಂಗೀತದ ರಸದೌತಣ ಉಣಬಡಿಸುತ್ತಿದೆ ಎಂದು ವಿವರಿಸಿದೆ.

ಒಂದು ವರ್ಷದ ಹಿಂದೆ ದೇಶದಲ್ಲಿ ಪ್ರತಿ ವ್ಯಕ್ತಿಯ ಮೊಬೈಲ್‌ ಡೇಟಾ ಬಳಕೆಯು ತಿಂಗಳಿಗೆ 34 ಜಿಬಿಗಿಂತ ಕಡಿಮೆಯಾಗಿತ್ತು. 2026ರ ಮಾರ್ಚ್‌ ಅಂತ್ಯಕ್ಕೆ ಜಿಯೊ ನೆಟ್‌ವರ್ಕ್‌ನಲ್ಲಿ ಪ್ರತಿ ವ್ಯಕ್ತಿಯ ಡೇಟಾ ಬಳಕೆ ಪ್ರಮಾಣವು ತಿಂಗಳಿಗೆ 42 ಜಿಬಿ ದಾಟಿದೆ. ಭಾರತವು ಈಗ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಡೇಟಾ ಬಳಕೆದಾರ ರಾಷ್ಟ್ರವಾಗಿದೆ ಎಂದು ತಿಳಿಸಿದೆ.

ಪ್ರಸ್ತುತ ದೇಶದಲ್ಲಿ 260 ಮಿಲಿಯನ್‌ಗಿಂತಲೂ ಹೆಚ್ಚು ಜನರು ಇನ್ನೂ 2ಜಿ ಸೇವೆ ಬಳಸುತ್ತಿದ್ದಾರೆ. ಅವರಿಗಾಗಿಯೇ 'ಜಿಯೊ ಭಾರತ್ ಫೋನ್' ವಿನ್ಯಾಸಗೊಳಿಸಲಾಗಿದೆ. ಇದು ಯುಪಿಐ ಪಾವತಿ, ವಿಡಿಯೊ ಸ್ಟ್ರೀಮಿಂಗ್ ಮತ್ತು ಮನರಂಜನೆಗೂ ನೆರವಾಗಿದೆ. ಕೈಗೆಟಕುವ ದರಲ್ಲಿ ಸ್ಮಾರ್ಟ್ ಫೀಚರ್ ಫೋನ್ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಹೇಳಿದೆ.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲೂ ಜಿಯೊ ಪ್ರವೇಶಿಕೆಯು ಸದೃಢವಾಗಿದೆ. ಜಿಯೊಎಐಕ್ಲೌಡ್‌ ಮೂಲಕ ಸೇವೆ ಒದಗಿಸಲಾಗುತ್ತಿದೆ. ಜಿಯೊ ಅನ್‌ಲಿಮಿಟೆಡ್ 5ಜಿ ಬಳಕೆದಾರರಿಗೆ 18 ತಿಂಗಳವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 'ಗೂಗಲ್‌ ಎಐ ಪ್ರೊ' ಯೋಜನೆಯ ಸೌಲಭ್ಯ ಸಿಗಲಿದೆ ಎಂದು ತಿಳಿಸಿದೆ.

ದೇಶದ ಆರ್ಥಿಕತೆಯ ಬೆಳವಣಿಗೆಗೆ ಜಿಯೊ ಅತಿದೊಡ್ಡ ಕೊಡುಗೆ ನೀಡುತ್ತಿದೆ. ದೇಶದ ಹತ್ತರಲ್ಲಿ ಒಂಬತ್ತಕ್ಕಿಂತ ಹೆಚ್ಚು ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಜಿಯೊ ಸೇವೆ ಬಳಸುತ್ತವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 80ಕ್ಕಿಂತ ಹೆಚ್ಚು ವಿದ್ಯುತ್ ವಿತರಣಾ ಕಂಪನಿಗಳ ಸಂಪರ್ಕ ಮತ್ತು ಸಂವೇದಕ ಜಾಲಗಳು ಜಿಯೊವನ್ನು ಅವಲಂಬಿಸಿವೆ. ವಿಮಾನ ನಿಲ್ದಾಣ, ಷೇರುಪೇಟೆ, ಐಟಿ ಕಂಪನಿಗಳ ನೆಟ್‌ವರ್ಕ್‌ ಸೇವೆಯಲ್ಲಿ ಜಿಯೊದ ಕೊಡುಗೆ ಇದೆ. ದೇಶದ ರಸ್ತೆಗಳಲ್ಲಿ ಸಂಚರಿಸುವ ಪ್ರತಿ ಎರಡು 'ಕನೆಕ್ಟೆಡ್' (ಅಂತರ್ಜಾಲ ಸಂಪರ್ಕವಿರುವ) ಎಲೆಕ್ಟ್ರಿಕ್ ದ್ವಿಚಕ್ರವಾಹನಗಳಲ್ಲಿ ಒಂದು ಜಿಯೊ ಸಂಪರ್ಕದ ಮೂಲಕ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದೆ.

ಜಿಯೊ ತನ್ನ ನೆಟ್‌ವರ್ಕ್, ಅಪ್ಲಿಕೇಷನ್ಸ್‌, ಆಪರೇಟಿಂಗ್ ಸಿಸ್ಟಂ ಮೂಲಕ ತಂತ್ರಜ್ಞಾನದ ಅಭಿವೃದ್ಧಿಗೆ ಒತ್ತು ನೀಡಿದೆ. 2026ರ ಮಾರ್ಚ್‌ ಅಂತ್ಯದ ವೇಳೆಗೆ 4ಜಿ, 5ಜಿ ಮತ್ತು 6ಜಿ ಕೋರ್ ನೆಟ್‌ವರ್ಕ್ ಆರ್ಕಿಟೆಕ್ಚರ್ ಹಾಗೂ ಎಐ ಚಾಲಿತ ನೆಟ್‌ವರ್ಕ್ ಆಟೊಮೇಷನ್‌ಗೆ ಸಂಬಂಧಿಸಿದಂತೆ 6,800ಕ್ಕೂ ಹೆಚ್ಚು ಪೇಟೆಂಟ್ ಅರ್ಜಿ ಸಲ್ಲಿಸಿದೆ. ಕಳೆದ ವರ್ಷ ವಿಶ್ವದ ಅಗ್ರ 20 ಪೇಟೆಂಟ್ ಸಲ್ಲಿಸುವ ಕಂಪನಿಗಳ ಪಟ್ಟಿಯಲ್ಲಿ ಜಿಯೊ ಸ್ಥಾನ ಗಿಟ್ಟಿಸಿಕೊಂಡಿತ್ತು.

ದೇಶದಲ್ಲಿ 5ಜಿ ನೆಟ್‌ವರ್ಕ್ ಸೇವೆಯಲ್ಲೂ ಮುಂಚೂಣಿ ಕಾಯ್ದುಕೊಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಜಿಯೊ ಕೇಂದ್ರಗಳು ಮತ್ತು ಆರು ಸಾವಿರಕ್ಕೂ ಹೆಚ್ಚು ಜಿಯೊ ಪಾಯಿಂಟ್‌ಗಳ ಮೂಲಕ ಜನಸಾಮಾನ್ಯರಿಗೆ 5ಜಿ ಸೇವೆ ಒದಗಿಸಲಾಗುತ್ತದೆ. 'ಡಿಜಿಟಲ್‌ ಇಂಡಿಯಾ'ದ ಆಶಯವಾದ ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆಧಾರಿತ ಆರ್ಥಿಕತೆ ಅಭಿವೃದ್ಧಿಗೆ ಜಿಯೊ ಕೊಡುಗೆ ನೀಡುತ್ತಿದೆ ಎಂದು ವಿವರಿಸಿದೆ.

(ಕಂಪನಿಯ ಆಹ್ವಾನದ ಮೇರೆಗೆ ನಮ್ಮ ಪ್ರತಿನಿಧಿಯು ನವಿ ಮುಂಬೈನಲ್ಲಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಕಾರ್ಪೊರೇಟ್‌ ಕಚೇರಿ ಮತ್ತು ಕ್ಯಾಂಪಸ್‌ಗೆ ಭೇಟಿ ನೀಡಿದ್ದರು)

 ನವಿ ಮುಂಬೈನಲ್ಲಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಕಾರ್ಪೊರೇಟ್‌ ಕಚೇರಿ ನವಿ ಮುಂಬೈನಲ್ಲಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಕಾರ್ಪೊರೇಟ್‌ ಕಚೇರಿ ನವಿ ಮುಂಬೈನಲ್ಲಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ನ ಕಾರ್ಪೊರೇಟ್‌ ಕಚೇರಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries