ಬದಿಯಡ್ಕ: ಕೇರಳ ಸರ್ಕಾರದ ಕೃಷಿ ಅಭಿವೃದ್ಧಿ ಹಾಗೂ ರೈತ ಕಲ್ಯಾಣ ಇಲಾಖೆ, ರಾಮಂತಳಿ ಕೃಷಿ ಭವನ ಹಾಗೂ ಕಣ್ಣೂರು 'ಆತ್ಮ' ಪಯ್ಯನ್ನೂರು ಬ್ಲಾಕ್ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಎಸ್‍ಸಿಪಿಎಸ್‍ಸಿ ಯೋಜನೆಯಡಿ ಆಯೋಜಿಸಲಾದ ಕೃಷಿ ಅಧ್ಯಯನ ಪ್ರವಾಸದ ಅಂಗವಾಗಿ ಕಣ್ಣೂರು ಜಿಲ್ಲೆಯ ರಾಮಂತಳಿಯ ಮಹಿಳಾ ರೈತರ ತಂಡವು ಡಾ. ರತ್ನಾಕರ ಮಲ್ಲಮೂಲೆಯವರ ನೀರ್ಚಾಲಿನ ಬನವಾಸಿಯ ಕೃಷಿಧಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು. ಈ ಅಧ್ಯಯನ ಪ್ರವಾಸದ ನೇತೃತ್ವವನ್ನು ಕಣ್ಣೂರು, ರಾಮಂತಳಿ ಕೃಷಿ ಭವನದ ಕೃಷಿ ಅಧಿಕಾರಿ ಪ್ರೀತಾ ಕೆ., ಸಹಾಯಕ ಕೃಷಿ ಅಧಿಕಾರಿ ಅಂಜನಾ ವಿಜಯನ್, ರೇಷ್ಮಾ ವಹಿಸಿದ್ದರು.
ಸಂದರ್ಶನದ ವೇಳೆ ಮಹಿಳಾ ರೈತರು ಬನವಾಸಿಯ ವೈವಿಧ್ಯಮಯ ಪ್ರಾಯೋಗಿಕ ಕೃಷಿ ವಿಧಾನಗಳು, ಬಹುಬೆಳೆ ಪದ್ಧತಿ ಹಾಗೂ ನೈಸರ್ಗಿಕ ಕೃಷಿ ಮಾದರಿಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದರು. ವಿಶೇಷವಾಗಿ ಇಲ್ಲಿನ ಔಷಧೀಯ ಸಸ್ಯಗಳ ತೋಟಕ್ಕೆ ಭೇಟಿ ನೀಡಿ ಅಪರೂಪದ ಗಿಡಮೂಲಿಕೆಗಳ ಸಂರಕ್ಷಣೆ, ಅವುಗಳ ಕೃಷಿ ತಾಂತ್ರಿಕತೆ ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.
ಕೃಷಿಯಲ್ಲಿ ನೀರಿನ ಮಿತವ್ಯಯ ಹಾಗೂ ಸಂರಕ್ಷಣೆಗೆ ಅಳವಡಿಸಿರುವ ವೈಜ್ಞಾನಿಕ ಮಳೆಕೊಯ್ಲು ತಂತ್ರಜ್ಞಾನಗಳು ಮತ್ತು ಅಂತರ್ಜಲ ಮಟ್ಟ ಹೆಚ್ಚಿಸುವ ಜಲ ಮರುಪೂರಣ ಘಟಕಗಳ ಕಾರ್ಯವೈಖರಿಯನ್ನು ರೈತರು ಆಸಕ್ತಿಯಿಂದ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದರೊಂದಿಗೆ ನೀರಾವರಿ ಹಾಗೂ ಕೃಷಿ ಚಟುವಟಿಕೆಗಳಿಗೆ ಪರ್ಯಾಯ ಇಂಧನವಾಗಿ ಸೌರಶಕ್ತಿಯನ್ನು (ಸೋಲಾರ್) ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ವಿಧಾನದ ಬಗ್ಗೆಯೂ ಅಧಿಕಾರಿಗಳು ಹಾಗೂ ರೈತರು ವಿವರಣೆ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಂತಳಿ ಕೃಷಿ ಭವನದ ಅಧಿಕಾರಿ ಪ್ರೀತಾ ಕೆ. ಅವರು ಮಾತನಾಡಿ, ಬನವಾಸಿ ಪ್ರಕೃತಿ ಧಾಮವು ವಿವಿಧ ಬಗೆಯ ಸಸ್ಯಗಳನ್ನೊಳಗೊಂಡ ಸುಂದರ ಹಾಗೂ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಕೃಷಿ ತೋಟವಾಗಿದೆ. ಸೀಮಿತ ವಿಸ್ತೀರ್ಣದ ಜಾಗದಲ್ಲೇ ಹಲವು ಬಗೆಯ ಬೆಳೆಗಳನ್ನು ಬೆಳೆಸಿ ಅದನ್ನು ಸಮಾಜ ಜಾಗೃತಿಗಾಗಿ ತೆರೆದಿಟ್ಟ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆಯವರ ಪರಿಶ್ರಮ ಶ್ಳಾಘನೀಯ ಎಂದು ಅಭಿಪ್ರಾಯಪಟ್ಟರು. ಬನವಾಸಿಯ ಈ ಸುಸ್ಥಿರ ಮತ್ತು ಪರಿಸರಸ್ನೇಹಿ ಕೃಷಿ ಮಾದರಿಗಳು ತಮ್ಮ ಸ್ವಂತ ಕೃಷಿಯಲ್ಲಿಯೂ ಅಳವಡಿಸಿಕೊಳ್ಳಲು ಅತ್ಯಂತ ಪ್ರೇರಣಾದಾಯಕವಾಗಿವೆ ಎಂದು ಪ್ರವಾಸದಲ್ಲಿದ್ದ ರೈತ ಮಹಿಳೆಯರು ಅಭಿಪ್ರಾಯಪಟ್ಟರು. ಸುಮಾರು ಇಪ್ಪತೈದು ಮಹಿಳಾ ಕೃಷಿಕರು ಮತ್ತು ಮೂವರು ಕೃಷಿ ಅಧಿಕಾರಿಗಳು ತಂಡಕ್ಕೆ ನೇತೃತ್ವ ನೀಡಿದರು.

.jpeg)
.jpeg)
.jpeg)
