ನವದೆಹಲಿ: ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಜಗತ್ತಿನಾದ್ಯಂತ ಸಾಮಾನ್ಯ ಜನರ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ, ಈ ಸವಾಲುಗಳನ್ನು ಎದುರಿಸಲು ಬ್ರಿಕ್ಸ್ ರಾಷ್ಟ್ರಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಬ್ರಿಕ್ಸ್ ಶೃಂಗಸಭೆಯಲ್ಲಿ ಮಾತನಾಡಿದ ಮೋದಿ, 'ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳನ್ನು ಅಸ್ತ್ರವಾಗಿಸುವುದರ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದರು. ಇದು ಜಾಗತಿಕ ಪ್ರಗತಿ ಮತ್ತು ಸಮೃದ್ಧಿಗೆ ಅಡ್ಡಿಯಾಗಬಹುದು ಎಂದು ಎಚ್ಚರಿಸಿದರು.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಮತ್ತು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಸೇರಿದಂತೆ ಬ್ರಿಕ್ಸ್‌ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.
'ಭಾರತದ ಅಧ್ಯಕ್ಷತೆಯಲ್ಲಿ ಸ್ಥಿತಿಸ್ಥಾಪಕತೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆ ಎಂಬ ನಾಲ್ಕು ಅಂಶಗಳಿಗೆ ನಾವು ಒತ್ತು ನೀಡಿದ್ದೇವೆ. ನಿಮ್ಮ ಸಹಕಾರದೊಂದಿಗೆ ನಮ್ಮ ಗುರಿಯನ್ನು ಈಡೇರಿಸಲು ಸಾಧ್ಯವಾಗಿದೆ' ಎಂದು ಮೋದಿ ಹೇಳಿದರು.
ಸಾಂಕ್ರಾಮಿಕ ರೋಗಗಳು, ಹವಾಮಾನ ವಿಪತ್ತುಗಳು ಮತ್ತು ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಗಳು, ಇಂದಿನ ಜಗತ್ತಿನಲ್ಲಿ ಯಾವುದೇ ಬಿಕ್ಕಟ್ಟು ಒಂದೇ ಪ್ರದೇಶಕ್ಕೆ ಸೀಮಿತವಾಗುವುದಿಲ್ಲ ಎಂಬುದನ್ನು ತೋರಿಸಿವೆ. ಆದ್ದರಿಂದ, ಸವಾಲುಗಳನ್ನು ಮೊದಲೇ ಗುರುತಿಸಿ, ಅವುಗಳನ್ನು ಎದುರಿಸಲು ಸಿದ್ಧರಾಗಬೇಕು ಮತ್ತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ಅವುಗಳಿಗೆ ಪ್ರತಿಕ್ರಿಯಿಸಲು ಬ್ರಿಕ್ಸ್ ಸಮಗ್ರ ಮುನ್ನೆಚ್ಚರಿಕೆ ವ್ಯವಸ್ಥೆ ರೂಪಿಸುವ ಕುರಿತು ಒಮ್ಮತಕ್ಕೆ ಬರಲಾಗಿದೆ. ಮುನ್ನೆಚ್ಚರಿಕೆ ಮಾಹಿತಿಯ ಏಕೀಕರಣ ವ್ಯವಸ್ಥೆಗಾಗಿ ಮಾರ್ಗಸೂಚಿಗಳನ್ನೂ ರೂಪಿಸಲಾಗಿದೆ ಎಂದು ಮೋದಿ ತಿಳಿಸಿದರು.

