ಪಟ್ನಾ: ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯಕಾಂತ್ ಅವರು ಪಟ್ನಾದಲ್ಲಿ ಶನಿವಾರ ಕಾನೂನು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸಿಜೆಐ ಒಬ್ಬರು ಕಾನೂನು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಿರುವುದು ಇದೇ ಮೊದಲು.
ಚಾಣಕ್ಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ನಡೆದ ಸಂವಾದದಲ್ಲಿ ಸೂರ್ಯಕಾಂತ್ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಮುಕ್ತವಾಗಿ, ಪೂರ್ವ ತಯಾರಿ ಇಲ್ಲದೇ ಉತ್ತರಿಸಿದರು.
ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ ವಿರುದ್ಧದ ಪೊಲೀಸರ ನಡೆಯ ಬಗ್ಗೆ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೂರ್ಯಕಾಂತ್ ಅವರು, ಶಾಂತಿಯುತ ಪ್ರತಿಭಟನೆಯ ಮೂಲಭೂತ ಹಕ್ಕನ್ನು ರಕ್ಷಿಸುವ ನ್ಯಾಯಾಂಗದ ಬದ್ಧತೆಯನ್ನು ಪುನರುಚ್ಚರಿಸಿದರು.
ಕೊಲಿಜಿಯಂನಲ್ಲಿ ವ್ಯಕ್ತವಾಗುವ ಭಿನ್ನ ಅಭಿಪ್ರಾಯಗಳನ್ನು ದಾಖಲಿಸಲಾಗತ್ತದೆ. ಆದರೆ ಯಾಕೆ ಬಹಿರಂಗಪಡಿಸಲಾಗುವುದಿಲ್ಲ ಎಂಬ ಪ್ರಶ್ನೆಗೆ, 'ಎಲ್ಲ ಮಾಹಿತಿಯ ಬಹಿರಂಗವೂ ಸದುದ್ದೇಶದಿಂದ ಕೂಡಿದ್ದರೂ, ಸಮರ್ಥ ವ್ಯಕ್ತಿಯ ಘನೆತಯನ್ನು ಕುಗ್ಗಿಸುವ ಸಾಧ್ಯತೆ ಇರುತ್ತದೆ. ಘನತೆಗೆ ಧಕ್ಕೆ ಉಂಟಾಗಬಹುದು ಎಂಬ ಸಂದರ್ಭದಲ್ಲಿ ಪಾರದರ್ಶಕತೆಗೂ ಮಿತಿ ಇರುತ್ತದೆ. ಮುಖ್ಯನ್ಯಾಯಮೂರ್ತಿ ಅಥವಾ ನ್ಯಾಯಮೂರ್ತಿಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ಋಣಾತ್ಮಕ ಭಾವನೆಗಳು ವ್ಯಕ್ತವಾದರೆ ಹೇಗಿರುತ್ತದೆ' ಎಂದು ಮರುಪ್ರಶ್ನೆ ಹಾಕಿದರು.
'ನ್ಯಾಯವ್ಯವಸ್ಥೆ ದುರ್ಬಲರನ್ನು ತಲುಪಬೇಕು'
ನ್ಯಾಯವ್ಯವಸ್ಥೆ ದುರ್ಬಲರನ್ನು ತಲುಪಬೇಕು. ಅಪರಾಧ ಪ್ರಕರಣಗಳಲ್ಲಿ ನ್ಯಾಯದಾನ ಪ್ರಕ್ರಿಯೆಯು ಸಂತ್ರಸ್ತರು ಮತ್ತು ಅಪರಾಧದ ಮೇಲೆ ಕೇಂದ್ರಿಕೃತವಾಗಿರುತ್ತದೆ ಹಲವು ಪ್ರಕರಣಗಳಲ್ಲಿ ಸಂತ್ರಸ್ತರು ವ್ಯವಸ್ಥೆಯನ್ನು ತಮಗಾದ 'ಎರಡನೇ ಗಾಯ' ಎಂದು ಪರಿಭಾವಿಸುವಂತೆ ಮಾಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ(ಸಿಜೆಐ) ಸೂರ್ಯಕಾಂತ್ ಅವರು ಶನಿವಾರ ಹೇಳಿದರು. ಬಿಹಾರದ ಪಟ್ನಾದಲ್ಲಿ ರಾಜ್ಯ ಕಾನೂನು ಸೇವೆ ಪ್ರಾಧಿಕಾರ ಆಯೋಜಿಸಿದ್ದ ಸಂತ್ರಸ್ತರ ಹಕ್ಕುಗಳ ಕೇಂದ್ರ ಅದರ ಮಾರ್ಗಸೂಚಿ ಲಿಂಗತ್ವ ಅಲ್ಪಸಂಖ್ಯಾತರ ಸಹಾಯವಾಣಿ ಮತ್ತು ಬಹುಪಯೋಗಿ ಕೇಂದ್ರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 'ವ್ಯಕ್ತಿಯು ನ್ಯಾಯವನ್ನು ಬಯಸಿದಾಗ ಅದು ಅವರಿಗೆ ಸಿಗುತ್ತಿದೆಯೇ? ಇದು ನ್ಯಾಯಾಲಯಕ್ಕಷ್ಟೆ ಸೀಮಿತವಾಗಿದೆಯೇ ಅಥವಾ ಅಸಹಾಯಕ ದುರ್ಬಲ ವ್ಯಕ್ತಿಯನ್ನು ತಲುಪುತ್ತಿದೆಯೇ' ಎಂದು ಪ್ರಶ್ನಿಸಿದರು.

