ನವದೆಹಲಿ (PTI): 'ಅಯೋಧ್ಯೆ ರಾಮಮಂದಿರ ದೇಣಿಗೆ ಕಳವಾಗಿದೆ ಎಂಬ ಆರೋಪದ ಸುತ್ತಲಿನ ವಿವಾದಗಳನ್ನು ಕೊನೆಗೊಳಿಸಬೇಕು ಮತ್ತು ಅದನ್ನು 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಅಸ್ತ್ರವಾಗಿ ಬಳಸಬಾರದು' ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಶನಿವಾರ ತಿಳಿಸಿದೆ.
'ದೇವಾಲಯದ ನಿರ್ಮಾಣದಲ್ಲಿ ಕೆಲಸ ಮಾಡಿದವರು ಅಥವಾ ಟ್ರಸ್ಟ್‌ನ ಭಾಗವಾಗಿದ್ದವರು ಯಾವುದೇ ತಪ್ಪು ಮಾಡಿಲ್ಲ ಎಂದು ವಿಶೇಷ ತನಿಖಾ ತಂಡವು (ಎಸ್‌ಐಟಿ) ಸಲ್ಲಿಸಿದ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ' ಎಂದು ಅದು ಹೇಳಿದೆ.
'ಕಾಣಿಕೆಯನ್ನು ಎಣಿಸಲು ನಿಯೋಜಿಸಲಾಗಿದ್ದ ಕೆಲವು ವ್ಯಕ್ತಿಗಳು ಈ ಅಪರಾಧ ಮಾಡಿದ್ದಾರೆ ಮತ್ತು ಈಗ ಜೈಲಿನಲ್ಲಿದ್ದಾರೆ. ಇದರಲ್ಲಿ ಬೇರೆ ಯಾವುದೇ ಅಕ್ರಮಗಳಿಲ್ಲ. ಉಳಿದ ಲೆಕ್ಕಪತ್ರಗಳು ಸರಿಯಾಗಿವೆ ಮತ್ತು ರಾಮನಿಗೆ ನೀಡಿದ ಎಲ್ಲಾ ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿವೆ' ಎಂದು ವಿಎಚ್‌ಪಿ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಅವರು ತಿಳಿಸಿದ್ದಾರೆ.
'ಈ ತನಿಖೆಯು ಅನೇಕ ವಿವಾದಗಳಿಗೆ ತೆರೆ ಎಳೆದಿದೆ. ಟ್ರಸ್ಟಿಗಳು, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ, ಹಿಂದೂ ಅಭಿಯಾನ, ವಿಎಚ್‌ಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಮತ್ತು ದೇವಾಲಯದ ಆಡಳಿತ ಮಂಡಳಿಯ ವಿರುದ್ಧದ ಎಲ್ಲಾ ಪಿತೂರಿಗಳು ಸೋತಿವೆ' ಎಂದು ಅವರು ಹೇಳಿದ್ದಾರೆ.
'2027ರ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಗೆ ತಯಾರಿ ನಡೆಸುವಾಗ ರಾಮಮಂದಿರದ ವಿಷಯವನ್ನು ಬಳಸಬಾರದು. ಸತ್ಯ ಹೊರಬಂದಿದೆ. ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು ಮತ್ತು ವಿವಾದಗಳು ಕೊನೆಗೊಳ್ಳಬೇಕು' ಎಂದರು.
'ಎಸ್‌ಐಟಿ ತನಿಖೆ ಬಗ್ಗೆ ಅನುಮಾನ: ಕಾಂಗ್ರೆಸ್
ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳವು ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿರುವ ಬಗ್ಗೆ ಕಾಂಗ್ರೆಸ್ ಅನೇಕ ಪ್ರಶ್ನೆಗಳನ್ನು ಎತ್ತಿದ್ದು, 'ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ಮಾತ್ರ ಸತ್ಯವನ್ನು ಬಹಿರಂಗಪಡಿಸುತ್ತದೆ' ಎಂದು ಹೇಳಿದೆ.
'ದೇಣಿಗೆಯ ಕಳವು ಭಕ್ತರ ನಂಬಿಕೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದ್ದು, ದೇವಾಲಯದ ಆಡಳಿತ ಮಂಡಳಿ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ಜವಾಬ್ದಾರರಾಗಿರುವವರ ಪಾತ್ರವನ್ನು ತನಿಖೆ ಮಾಡದೆ, ಸತ್ಯ ಹೊರಬರಲು ಸಾಧ್ಯವಿಲ್ಲ' ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಈ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿರುವ ಅವರು, 'ಪ್ರಧಾನಿ ಮೋದಿಯವರೇ, ಮೌನ ಮುರಿಯಿರಿ ಇಲ್ಲದಿದ್ದರೆ ಕಳ್ಳರಿಗೆ ನಿಮ್ಮ ರಕ್ಷಣೆ ಇದೆ ಎಂದೆನಿಸುತ್ತದೆ' ಎಂದು ಹೇಳಿದ್ದಾರೆ.

