ಹೈದರಾಬಾದ್ (PTI): ತೆಲಂಗಾಣದ ಹೈದರಾಬಾದ್‌ನ ಸಿಕಂದರಾಬಾದ್‌ನಲ್ಲಿರುವ ಸೇನಾನೆಲೆಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳವು ಮಾಡಿದ ಆರೋಪದ ಮೇಲೆ ಸೇನಾಧಿಕಾರಿಯೊಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದಿರುವ ಅಧಿಕಾರಿಯ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಪ್ರಕರಣದಲ್ಲಿ ಇತರರು ಭಾಗಿಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬೊಲ್ಲಾರಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ, ಶಸ್ತ್ರಾಸ್ತ್ರ ಸಂಗ್ರಹಗಾರದಿಂದ ಐದು ಅಸಾಲ್ಟ್ ರೈಫಲ್, ಏಳು ಪಿಸ್ತೂಲ್‌ಗಳು, 21 ಮ್ಯಾಗಜೀನ್, ಮದ್ದುಗುಂಡುಗಳು ಹಾಗೂ ಇತರ ವಸ್ತುಗಳನ್ನು ಕಳವು ಮಾಡಲಾಗಿದೆ.
ಸಿಕಂದರಾಬಾದ್‌ನಲ್ಲಿರುವ ಮದ್ರಾಸ್ ರೆಜಿಮೆಂಟ್‌ನ 20ನೇ ಬೆಟಾಲಿಯನ್‌ನ ಲೆಫ್ಟಿನಂಟ್ ಕರ್ನಲ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಆಗಸ್ಟ್ 31ರಂದು ಶಸ್ತ್ರಾಸ್ತ್ರ ಸಂಗ್ರಹಾಗಾರದ ಬಾಗಿಲು ತೆರೆಯಲು ಹೋದಾಗ ಬಾಗಿಲಿನ ಬೀಗ ಮುರಿದಿರುವುದು ಕಂಡುಬಂದಿತ್ತು. ಬಳಿಕ ಮದ್ರಾಸ್ ರೆಜಿಮೆಂಟ್ ಅಧಿಕಾರಿಗಳು ಆಂತರಿಕ ತನಿಖೆಯನ್ನೂ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

