ನವದೆಹಲಿ: ಪಶ್ಚಿಮ ಏಷ್ಯಾದ ಸಂಘರ್ಷದ ವಿಚಾರದಲ್ಲಿ ಇರಾನ್ ಮತ್ತು ಯುಎಇ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಒಮ್ಮತದ ಜಂಟಿ ಘೋಷಣೆ ಅಂಗೀಕರಿಸುವಲ್ಲಿ ಶನಿವಾರ ಬ್ರಿಕ್ಸ್ ರಾಷ್ಟ್ರಗಳು ಯಶಸ್ವಿಯಾಗಿವೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ಅಬುಧಾಬಿಯ ಯುವರಾಜ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 'ನವದೆಹಲಿ ಘೋಷಣೆ'ಯನ್ನು ಪ್ರಕಟಿಸಿದರು.
ಘೋಷಣೆಯಲ್ಲಿ ಇರಾನ್ ಮೇಲಿನ ದಾಳಿಗೆ ಅಮೆರಿಕವನ್ನು ನೇರವಾಗಿ ಉಲ್ಲೇಖಿಸದಿರುವುದು ಗಮನ ಸೆಳೆದಿದೆ. ಬದಲಾಗಿ, ಪಶ್ಚಿಮ ಏಷ್ಯಾದ ಬಿಕ್ಕಟ್ಟಿಗೆ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂಬ ಭಾರತದ ನಿಲುವಿಗೆ ಬ್ರಿಕ್ಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಬ್ರಿಕ್ಸ್, ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ರಕ್ಷಣೆಯನ್ನು ಖಚಿತಪಡಿಸಬೇಕು ಹಾಗೂ ರಾಷ್ಟ್ರಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಘೋಷಣೆಯಲ್ಲಿ ಒತ್ತಿ ಹೇಳಿದೆ.
ಜಾಗತಿಕ ವ್ಯಾಪಾರ, ಪೂರೈಕೆ ಸರಪಳಿ ಮತ್ತು ಇಂಧನ ವಹಿವಾಟಿನ ನಿರಂತರ ಹರಿವನ್ನು ಕಾಪಾಡಲು ಸದಸ್ಯ ರಾಷ್ಟ್ರಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದೂ ತಿಳಿಸಿದೆ.
ಕದನ ವಿರಾಮ ಒಪ್ಪಂದದ ಹೊರತಾಗಿಯೂ ಗಾಜಾದಲ್ಲಿ ಹಿಂಸಾಚಾರ ಮುಂದುವರಿಯುತ್ತಿರುವ ಬಗ್ಗೆ ಬ್ರಿಕ್ಸ್ ಕಳವಳ ವ್ಯಕ್ತಪಡಿಸಿದ್ದು, ಗಾಜಾ ಪ್ರದೇಶದಿಂದ ಪ್ಯಾಲೆಸ್ಟೀನಿಯರನ್ನು ಬಲವಂತವಾಗಿ ಸ್ಥಳಾಂತರಿಸುವ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದೆ.
ಇದೇ ವೇಳೆ, ಭಯೋತ್ಪಾದನೆ ವಿರುದ್ಧ 'ಶೂನ್ಯ ಸಹಿಷ್ಣುತೆ' ನೀತಿ ಅನುಸರಿಸಬೇಕು ಎಂಬ ಭಾರತದ ನಿಲುವಿಗೆ ಬ್ರಿಕ್ಸ್ ಸಂಪೂರ್ಣ ಬೆಂಬಲ ನೀಡಿದೆ. ಭಯೋತ್ಪಾದನೆ ಎದುರಿಸುವಲ್ಲಿ ದ್ವಂದ್ವ ನೀತಿಗೆ ಅವಕಾಶ ಇರಬಾರದು ಎಂದು ನಾಯಕರು ಒತ್ತಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ವರ್ಷ ನಡೆದ ಉಗ್ರ ದಾಳಿಯನ್ನು ಬ್ರಿಕ್ಸ್ ರಾಷ್ಟ್ರಗಳು ಅತ್ಯಂತ ತೀವ್ರವಾಗಿ ಖಂಡಿಸಿವೆ. ಆ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು.
ಇನ್ನು, ಬ್ರಿಕ್ಸ್ ರಾಷ್ಟ್ರಗಳ ನಡುವಿನ ವ್ಯಾಪಾರ ವಹಿವಾಟುಗಳಲ್ಲಿ ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸ್ಥಳೀಯ ಕರೆನ್ಸಿಗಳ ಬಳಕೆಯನ್ನು ಹೆಚ್ಚಿಸುವಂತೆ ಘೋಷಣೆಯಲ್ಲಿ ಕರೆ ನೀಡಲಾಗಿದೆ. ಜೊತೆಗೆ, ಭವಿಷ್ಯದ ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಅವುಗಳಿಗೆ ಸಂಬಂಧಿಸಿದ ನಿಯಮ ರೂಪಿಸುವ ಪ್ರಕ್ರಿಯೆಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ(ಗ್ಲೋಬಲ್ ಸೌತ್) ಸಮಾನ ಅವಕಾಶ ದೊರೆಯಬೇಕು ಎಂದು ಪ್ರತಿಪಾದಿಸಲಾಗಿದೆ.

