ಭಾರತೀಯ ವಾಯುಪಡೆಯ ಮಾಜಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಗೋವಾದ ಪ್ರಾದೇಶಿಕ ವಿಮಾನಯಾನ ಸಂಸ್ಥೆ FLY91ನಲ್ಲಿ ಪೈಲಟ್ ಆಗಿ ಸೇರಿಕೊಂಡಿದ್ದಾರೆ ಎಂದು ಪಿಟಿಐ ತಿಳಿಸಿವೆ.
2019ರ ಫೆಬ್ರುವರಿ 14 ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದರು.
ಇದರ ಪರಿಣಾಮ 40 ಯೋಧರು ಹುತಾತ್ಮರಾದರು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಪಡೆಯು ಫೆಬ್ರುವರಿ 26ರಂದು ಪಾಕಿಸ್ತಾನದ ಬಾಲಾಕೋಟ್‌ನಲ್ಲಿದ್ದ ಜೈಷ್-ಎ-ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ವೈಮಾನಿಕ ದಾಳಿ ನಡೆಸಿತ್ತು.
ಈ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಮಿಗ್-21 ಬೈಸನ್ ಯುದ್ದ ವಿಮಾನದ ಮೂಲಕ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಇದೇ ಸಂದರ್ಭದಲ್ಲಿ ಅಭಿನಂದನ್ ಅವರಿದ್ದ ಯುದ್ಧವಿಮಾನವೂ ಪತನವಾಗಿತ್ತು. ಆಗ ಯುದ್ದ ವಿಮಾನದಿಂದ ಎಜೆಕ್ಟ್ ಆಗಿದ್ದ ಅವರು ಪ್ಯಾರಾಚೂಟ್ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಇಳಿದಿದ್ದರಿಂದ ಪಾಕಿಸ್ತಾನ ಸೇನೆಯು ಅವರನ್ನು ಬಂಧಿಸಿತ್ತು.
ಪಾಕಿಸ್ತಾನವು 3 ದಿನಗಳ ನಂತರ ಅವರನ್ನು ಮರಳಿ ಭಾರತಕ್ಕೆ ಒಪ್ಪಿಸಿತ್ತು. ಬಳಿಕ 2021ರಲ್ಲಿ ಅವರಿಗೆ ದೇಶದ ಅತ್ಯುನ್ನತ ಸೇನಾ ಶೌರ್ಯ ಪ್ರಶಸ್ತಿ 'ವೀರಚಕ್ರ' ವನ್ನು ನೀಡಿ ಗೌರವಿಸಲಾಗಿತ್ತು.
ಸದ್ಯ ಅಭಿನಂದನ್ ವರ್ಧಮಾನ್ ಅವರು ಖಾಸಗಿ FLY91 ವಿಮಾನ ಸಂಸ್ಥೆಯ ಪೈಲಟ್ ಆಗಿ ಆಗಸ್ಟ್‌ನಲ್ಲಿ ಸೇರ್ಪಡೆಯಾಗಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಈ ಕಾರಣದಿಂದ ಸಂಸ್ಥೆ ಈ ಬಗ್ಗೆ ಏನನ್ನು ಹೇಳಿಕೊಂಡಿಲ್ಲ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

