HEALTH TIPS

ಮಕ್ಕಳ ಕೊಲೆ: ಮರಣದಂಡನೆಗೆ ಗುರಿಯಾಗಿದ್ದ ತಾಯಿಯನ್ನು ಖುಲಾಸೆಗೊಳಿಸಿದ ಅಲಹಾಬಾದ್ HC

ಪ್ರಯಾಗ್‌ರಾಜ್: ತಮ್ಮ ಮೂವರು ಮಕ್ಕಳನ್ನು ಕೊಂದ ಆರೋಪದ ಮೇಲೆ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಮಹಿಳೆಯನ್ನು ಅಲಹಾಬಾದ್ ಹೈಕೋರ್ಟ್ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಷನ್ ಆರೋಪಿಯ ಮೇಲಿನ ಅಪರಾಧವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.  


ಪ್ರಕರಣದಲ್ಲಿ ಬದುಕುಳಿದಿದ್ದ ಎಂಟು ವರ್ಷದ ಬಾಲಕನ, (ಪ್ರತ್ಯಕ್ಷ ಸಾಕ್ಷಿ) ಹೇಳಿಕೆಯಲ್ಲಿ ಬಹಳಷ್ಟು ವೈರುಧ್ಯಗಳಿದ್ದವು ಮತ್ತು ಆತನಿಗೆ ಯಾರೋ ಹೇಳಿಕೊಟ್ಟು ಸಾಕ್ಷಿ ಹೇಳಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿದ್ಧಾರ್ಥ ವರ್ಮಾ ಹಾಗೂ ನ್ಯಾಯಮೂರ್ತಿ ಜೈ ಕೃಷ್ಣ ಉಪಾಧ್ಯಾಯ ಅವರನ್ನೊಳಗೊಂಡ ಪೀಠವು, ಪ್ರಮುಖ ಆರೋಪಿ ಪ್ರಿಯಾಂಕಾ (ತಾಯಿ) ಮತ್ತು ಆಕೆಯ ದಿವಂಗತ ಪತಿಯ ಸಹೋದರ ಆಶಿಶ್ ಅಲಿಯಾಸ್ ದೈನಿಗೆ ಕೆಳ ನ್ಯಾಯಾಲಯ ವಿಧಿಸಲಾಗಿದ್ದ ಶಿಕ್ಷೆಯನ್ನು ಮಂಗಳವಾರ ರದ್ದುಗೊಳಿಸಿದೆ.

ವಿಚಾರಣಾ ನ್ಯಾಯಾಲಯವು ಪ್ರಿಯಾಂಕಾಗೆ ಮರಣದಂಡನೆ ಹಾಗೂ ಆಶಿಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದೀಗ ಹೈಕೋರ್ಟ್ ಇಬ್ಬರನ್ನೂ ಖುಲಾಸೆಗೊಳಿಸಿದ್ದು, ಬೇರೆ ಯಾವುದೇ ಪ್ರಕರಣಗಳಲ್ಲಿ ಬಂಧನದ ಅಗತ್ಯವಿಲ್ಲದಿದ್ದರೆ ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ:

2024ರ ಜೂನ್ 27ರಂದು ಔರೈಯಾದ ಸೇಂಗುರ್ ನದಿಯಲ್ಲಿ ಮಾಧವ ಅಲಿಯಾಸ್ ಗಂಗ(6), ಆದಿತ್ಯ ಅಲಿಯಾಸ್ ತಿಲ್ಲಾ (5) ಮತ್ತು ಮಂಗಲ್ (7) ಎಂಬ ಮೂವರು ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು.

ಆರೋಪಿ ಪ್ರಿಯಾಂಕಾ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಮಕ್ಕಳನ್ನು ಮುಗಿಸಲು, ಸಹ ಆರೋಪಿ, ಪತಿಯ ಸಹೋದರ ಆಶಿಶ್ ಜೊತೆಗೂಡಿ ಸಂಚು ರೂಪಿಸಿದ್ದಳು. ಅದರಂತೆ ಬೆಳಿಗ್ಗೆ 5 ಗಂಟೆಗೆ ನಾಲ್ವರು ಮಕ್ಕಳನ್ನು ಸೇಂಗುರ್ ನದಿಯ ಸೇತುವೆಯ ಬಳಿ ಕರೆ ತಂದಿದ್ದಳು. ಬಳಿಕ ನಾಲ್ವರನ್ನೂ ನದಿಗೆ ತಳ್ಳಿ ಹತ್ಯೆಗೈಯಲು ಯತ್ನಿಸಿದ್ದರು. ಹಿರಿಯ ಮಗ ಸೋನು ಪ್ರಾಣಾಪಾಯದಿಂದ ಪಾರಾಗಿದ್ದರೆ, ಉಳಿದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಸಾಕ್ಷ್ಯದಲ್ಲಿದ್ದ ವೈರುಧ್ಯಗಳೇನು?:

ಘಟನೆಯ ಬಳಿಕ ಗ್ರಾಮ ಪ್ರಧಾನ್ (ಗ್ರಾಮ ಪಂಚಾಯತಿ ಅಧ್ಯಕ್ಷ) ತನ್ನನ್ನು ಮನೆಗೆ ಕರೆದೊಯ್ದಿದ್ದರು. ಅಲ್ಲಿ ನಡೆದ ಘಟನೆಯನ್ನು ವಿವರಿಸಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದರು. ನಂತರ ಚಿಕ್ಕಪ್ಪ ಮನೀಶ್‌ಗೆ ವಿಷಯ ಹೇಳಿ ಎಫ್‌ಐಆರ್ ದಾಖಲಿಸಿದ್ದಾಗಿ ಬದುಕುಳಿದಿದ್ದ ಬಾಲಕ ಹೇಳಿದ್ದ. ಆದರೆ ದೂರುದಾರ ಮನೀಶ್ ಕೋರ್ಟ್‌ನಲ್ಲಿ ಸಂಪೂರ್ಣ ವಿಭಿನ್ನ ಹೇಳಿಕೆ ನೀಡಿದ್ದರು. 'ಮಕ್ಕಳ ಸಾವಿನ ಬಗ್ಗೆ ಪೊಲೀಸರಿಗೆ ಪ್ರಧಾನ್ ಮಾಹಿತಿ ನೀಡಿದ್ದರು. ಅವರಿಂದ (ಪ್ರಧಾನ್ ) ನನಗೆ ವಿಷಯ ತಿಳಿಯಿತೇ ಹೊರತು ಬಾಲಕನಿಂದಲ್ಲ' ಎಂದಿದ್ದರು. ಅಷ್ಟೇ ಅಲ್ಲದೆ, ಘಟನೆಯ ಕುರಿತು ತಮಗೆ ಮಾಹಿತಿ ನೀಡಿದ ವ್ಯಕ್ತಿಯ ಹೆಸರು ಕೂಡ ತಮಗೆ ತಿಳಿದಿಲ್ಲ ಎಂದೂ ತಿಳಿಸಿದ್ದರು.

ಸಾಕ್ಷಿಗಳ ಹೇಳಿಕೆಯಲ್ಲಿದ್ದ ಈ ಗೊಂದಲ ಹಾಗೂ ವೈರುಧ್ಯಗಳನ್ನು ಪರಿಗಣಿಸಿದ ಹೈಕೋರ್ಟ್, ಇಬ್ಬರೂ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಿಯಾಂಕಾಗೆ ವಿಧಿಸಲಾಗಿದ್ದ ಮರಣದಂಡನೆ ಹಾಗೂ ಆಶಿಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries