ಮುಂಬೈ: 'ಧ್ವನಿವರ್ಧಕ ಬಳಸುವುದರಿಂದ ಮತ್ತು ಪಟಾಕಿಗಳನ್ನು ಸಿಡಿಸುವುದರಿಂದ ದೇವರು ನಮಗೇನಾದರೂ ಹೆಚ್ಚುವರಿಯಾಗಿ ಆಶೀರ್ವಾದವನ್ನೇನಾದರೂ ಮಾಡುತ್ತಾನೆಯೇ? ಸಂಭ್ರಮಾಚರಣೆಗಳು ಹೆಚ್ಚು ಹೆಚ್ಚು ನಾಗರಿಕವಾಗಿರಬೇಕು. ಜವಾಬ್ದಾರಿಯುತ ಸಮಾಜವಾಗಿ ಈ ಎಲ್ಲದಕ್ಕೂ ನಾವು ಅಂತ್ಯ ಹಾಡಬೇಕು' ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮೆರವಣಿಗೆಗಳಲ್ಲಿ ಪಟಾಕಿ ಸಿಡಿಸುವುದು, ಲೇಸರ್ ದೀಪ ಮತ್ತು ಲ್ಯುಮನ್ ದೀಪಗಳನ್ನು ಉರಿಸುವುದು, ಬೀಮ್‌ಗಳು ಹಾಗೂ ಧ್ವನಿವರ್ಧಕಗಳನ್ನು ಬಳಸಿ ಸಂಗೀತ ಹಾಕುವುದನ್ನು ನಿಷೇಧಿಸಿ ಕೋರ್ಟ್ ಆದೇಶ ಹೊರಡಿಸಿದೆ.
ಮೆರವಣಿಗೆಗಳ ವೇಳೆ ಸಂಭವಿಸುವ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದ ಸಂಬಂಧ ಬಾಂಬೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು. ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ನೀಲಾ ಗೋಖಲೆ ಅವರ ಪೀಠ ವಿಚಾರಣೆ ನಡೆಸಿತು.
ದೊಡ್ಡ ದೊಡ್ಡ ಪೆಂಡಾಲ್‌ಗಳು ಅನಂತ ಚತುದರ್ಶಿಯಂದು (ಸೆ. 25) ಗಣೇಶಮೂರ್ತಿಗಳ ವಿಸರ್ಜನೆ ಮಾಡಲಿವೆ. ಈ ಹಿನ್ನೆಲೆಯಲ್ಲಿ ಈ ಆದೇಶ ಮಹತ್ವ ಪಡೆದುಕೊಂಡಿದೆ.
'ರಸ್ತೆಗಳಲ್ಲಿ ಪಟಾಕಿ ಸಿಡಿಸುವುದರಿಂದ ಆಗುತ್ತಿರುವ ವಾಯು ಮಾಲಿನ್ಯದ ಬಗ್ಗೆ ಕಳವಳವಾಗುತ್ತದೆ. ರಸ್ತೆಯಲ್ಲಿ ಪಟಾಕಿ ಸಿಡಿಸುವುದರಿಂದ ಪಾದಚಾರಿಗಳು, ದ್ವಿಚಕ್ರ ವಾಹನಗಳು, ಕಾರುಗಳಿಗೆ ಸಮಸ್ಯೆಯಾಗುತ್ತಿದೆ. ಪಟಾಕಿ ಕಿಡಿ ತಗುಲಿ ಗಂಭೀರ ಅವಗಢ ಸಂಭವಿಸಬಹುದು' ಎಂದು ಪೀಠ ಅಭಿಪ್ರಾಯಪಟ್ಟಿತು.
-ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ತಮ್ಮ ಮೇಲೆ ವ್ಯಕ್ತಿಯಾಗಿ ಮತ್ತು ಸಾಮುದಾಯಿಕವಾಗಿ ಜವಾಬ್ದಾರಿಗಳು ಇರುವುದನ್ನು ಪ್ರತಿಯೊಬ್ಬರೂ ಅರಿಯಬೇಕು.
-ಬಾಂಬೆ ಹೈಕೋರ್ಟ್ ಪೀಠ

