ಇಂಫಾಲ: ರವಿವಾರ ಶಂಕಿತ ಬಂಡುಕೋರರು ನಡೆಸಿದ ದಾಳಿಯಲ್ಲಿ ಕುಕಿ-ಝೋ ಸಮುದಾಯದ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಕುಕಿ-ಝೋ ಸಂಘಟನೆಗಳು ತಿಳಿಸಿವೆ.
ಆದರೆ, ಈ ಘಟನೆಯ ಕುರಿತು ಸರಕಾರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಧಿಕಾರಿಗಳು ಈ ಘಟನೆಗಳನ್ನು ದೃಢಪಡಿಸಿದ್ದರೂ, ಮತ್ತಷ್ಟು ಮಾಹಿತಿಯನ್ನು ಹಂಚಿಕೊಂಡಿಲ್ಲ.
ಭಾನುವಾರ ಮುಂಜಾನೆ ಟಾಮೆಂಗ್ಲಾಂಗ್ ಜಿಲ್ಲೆಯ ಟೋಲನ್ ಗ್ರಾಮದಲ್ಲಿ ಮೊದಲ ದಾಳಿ ನಡೆದಿದ್ದು, ಈ ದಾಳಿಯಲ್ಲಿ ಸೈನೆಹ್ ಸಿಂಗ್ಸಿತ್ ಹಾಗೂ ಅವರ ಪತ್ನಿ ಲ್ಹಿಂಗ್ಝಾಂಗೈ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ದಂಪತಿಯ ಆರು ವರ್ಷದ ಮಗು ಗಾಯಗೊಂಡಿದ್ದು, ಒಂದು ಬುಲೆಟ್ ಮಗುವಿನ ದೇಹದಲ್ಲಿ ಈಗಲೂ ಉಳಿದಿದೆ ಎಂದು ವರದಿಯಾಗಿದೆ ಎಂದು ಕುಕಿ-ಝೋ ಸಂಘಟನೆಗಳು ತಿಳಿಸಿದೆ.
ಈ ದಾಳಿಯಲ್ಲಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಪತಿಯು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೆಲ ಗಂಟೆಗಳ ಬಳಿಕ ನೋನಿ ಜಿಲ್ಲೆಯ ಲಾಂಗ್ಪಿ ಗ್ರಾಮದಲ್ಲಿ ಅಕ್ಕಿ ಸಾಗಣೆ ಮಾಡುತ್ತಿದ್ದ ಮೂವರ ಮೇಲೆ ಹೊಂಚು ಹಾಕಿ ದಾಳಿ ನಡೆಸಲಾಗಿದೆ ಎಂದು ಕುಕಿ-ಝೋ ಸಂಘಟನೆಗಳು ಹೇಳಿವೆ.
ಈ ದಾಳಿಯಲ್ಲಿ ಜೂಲಿ ಗಾಂಗ್ಟೆ ಹಾಗೂ ತಾಂಗ್ರಿಯೋಲ್ ಗಾಂಗ್ಟೆ ಎಂಬವರು ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆಯನ್ನು ಅದೇ ಬಂಡುಕೋರರ ಗುಂಪು ಅಪಹರಿಸಿದ್ದು, ಆಕೆ ಈಗಲೂ ನಾಪತ್ತೆಯಾಗಿದ್ದಾಳೆ ಎಂದು ಹೇಳಲಾಗಿದೆ.
ಈ ದಾಳಿಗಳನ್ನು ನಾಗಾ ಬಂಡುಕೋರರ ಗುಂಪು ನಡೆಸಿದೆ ಎಂದು ಕುಕಿ-ಝೋ ಸಂಘಟನೆಗಳು ಆರೋಪಿಸಿವೆ.

