ನವದೆಹಲಿ: ಗುರುವಾರ ಭಾರತೀಯ ಬಾರ್ ಕೌನ್ಸಿಲ್ ಅನ್ನು (BCI) ತೀವ್ರ ತರಾಟೆಗೆತ್ತಿಕೊಂಡಿರುವ ಸರ್ವೋಚ್ಚ ನ್ಯಾಯಾಲಯವು, ಕಾನೂನು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಶಿಸ್ತಿಗೊಳಪಡಿಸಲು ಅಥವಾ ವಿದ್ಯಾರ್ಥಿಗಳ ನಡವಳಿಕೆಯ ಬಗ್ಗೆ ಕಾನೂನು ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲು ಅದಕ್ಕೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೈದರಾಬಾದ್‌ನ ಎನ್‌ಎಎಲ್‌ಎಸ್‌ಎಆರ್ ಕಾನೂನು ವಿವಿಯ 2026ನೇ ಬ್ಯಾಚ್‌ನ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹೊರಡಿಸಿದ್ದ ಬಿಸಿಐ ಸಂವಹನಗಳನ್ನು ರದ್ದುಗೊಳಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು,ಕಾನೂನು ವಿದ್ಯಾರ್ಥಿಗಳ ಮೇಲಿನ ಶಿಸ್ತಿನ ನಿಯಂತ್ರಣವು ಸಂಪೂರ್ಣವಾಗಿ ಅವರು ಅಧ್ಯಯನ ಮಾಡುತ್ತಿರುವ ವಿವಿ ಅಥವಾ ಶಿಕ್ಷಣ ಸಂಸ್ಥೆಗೆ ಮಾತ್ರ ಸೇರಿದೆ ಎಂದು ತಿಳಿಸಿತು.
1961ರ ವಕೀಲರ ಕಾಯ್ದೆಯು ಬಿಸಿಐಗೆ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಯಾವುದೇ ಸ್ಪಷ್ಟ ಅಥವಾ ಸೂಚಿತ ಅಧಿಕಾರವನ್ನು ನೀಡಿಲ್ಲ ಎಂದು ನ್ಯಾಯಮೂರ್ತಿಗಳಾದ ಜಾಯಮಾಲ್ಯಬಾಗ್ಚಿ ಮತ್ತು ವಿ.ಮೋಹನಾ ಅವರನ್ನೂ ಒಳಗೊಂಡಿದ್ದ ಪೀಠವು ಎತ್ತಿ ಹಿಡಿಯಿತು. ಬಿಸಿಐ ಕಾನೂನಿಗೆ ಅನುಗುಣವಾಗಿ ಕಾನೂನು ಶಿಕ್ಷಣದ ಮಾನದಂಡಗಳನ್ನು ಮಾತ್ರ ಜಾರಿಗೆ ತರಬಹುದೇ ಹೊರತು ಕಾನೂನು ವಿದ್ಯಾರ್ಥಿಗಳ ವಿರುದ್ಧ ಪ್ರತ್ಯಕ್ಷವಾಗಿ ಶಿಸ್ತು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಪೀಠವು ಸ್ಪಷ್ಟಪಡಿಸಿತು.
ಘಟಿಕೋತ್ಸವ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ವಿರೋಧಿಸಿ ಎನ್‌ಎಎಲ್‌ಎಸ್‌ಎಆರ್ ವಿದ್ಯಾರ್ಥಿಗಳ ಪ್ರತಿಭಟನೆಯ ಬಳಿಕ ಬಿಸಿಐ ಅನಧಿಕೃತವಾಗಿ ಹಸ್ತಕ್ಷೇಪ ಮಾಡಿದ್ದನ್ನು ಪ್ರಶ್ನಿಸಿ ಮಿಹಿರ ಸೂದ್ ಅವರು ಸಲ್ಲಿದ್ದ ಅರ್ಜಿಯ ವಿಚಾರಣೆ ವೇಳೆ ಈ ಮಹತ್ವದ ತೀರ್ಪು ಹೊರಬಿದ್ದಿದೆ. ಆರಂಭದಲ್ಲಿ ಬಿಸಿಐ ವಿದ್ಯಾರ್ಥಿಗಳ ದಾಖಲಾತಿಯನ್ನು ತಡೆಯಲು ಮುಂದಾಗಿತ್ತಾದರೂ ಬಳಿಕ ತನ್ನ ವಿವಾದಾತ್ಮಕ ನಿರ್ದೇಶನಗಳನ್ನು ಹಿಂಪಡೆದಿತ್ತು.
ವಿದ್ಯಾರ್ಥಿ ಮತ್ತು ನೋಂದಾಯಿತ ವಕೀಲರ ನಡುವಿನ ವ್ಯತ್ಯಾಸವನ್ನು ಎತ್ತಿಹಿಡಿದ ಸರ್ವೋಚ್ಚ ನ್ಯಾಯಾಲಯವು, ವಿದ್ಯಾರ್ಥಿಗಳು ಪದವಿ ಮುಗಿಸಿ ವಕೀಲರಾಗಿ ನೋಂದಾಯಿಸಿಕೊಳ್ಳಲು ಬರುವ ಹಂತದಲ್ಲಿ ಬಿಸಿಐ ನಿಯಮಗಳ ಪ್ರಕಾರ ಪರಿಶೀಲನೆ ನಡೆಸಬಹುದೇ ಹೊರತು ವಿದ್ಯಾಭ್ಯಾಸದ ಹಂತದಲ್ಲಿ ವಿವಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಮುಂಚಿತವಾಗಿ ನಿರ್ಬಂಧ ಹೇರುವ ಅಧಿಕಾರ ಅದಕ್ಕೆ ಇಲ್ಲ ಎಂದು ತಿಳಿಸಿತು.
ವಿದ್ಯಾರ್ಥಿಯು ಪದವಿ ಪೂರ್ಣಗೊಳಿಸಿದ ಬಳಿಕವಷ್ಟೇ ಬಿಸಿಐ ತನ್ನ ಅಧಿಕಾರವನ್ನು ಬಳಸಲು ಸಾಧ್ಯ. ಅದಕ್ಕೂ ಮುನ್ನ ವಿವಿ ಮಟ್ಟದಲ್ಲೇ ಎಲ್ಲವೂ ಇತ್ಯರ್ಥವಾಗಬೇಕು ಎಂದು ನ್ಯಾಯಾಲಯವು ಹೇಳಿತು.
ಕೇವಲ ಪತ್ರಗಳನ್ನು ಅಥವಾ ನಿರ್ದೇಶನಗಳನ್ನು ಹಿಂಪಡೆಯುವುದರಿಂದ ಮಾತ್ರ ಅಧಿಕಾರ ವ್ಯಾಪ್ತಿಯ ದೊಡ್ಡ ಪ್ರಶ್ನೆಗೆ ಪೂರ್ಣ ಉತ್ತರ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಪೀಠವು, ಬಿಸಿಐನ ಒಟ್ಟಾರೆ ಕಾರ್ಯವೈಖರಿ ಮತ್ತು ನೀತಿ ನಿರ್ಧಾರಗಳ ಮೇಲೂ ತೀವ್ರ ನಿಗಾ ವಹಿಸುವ ಅಗತ್ಯವನ್ನು ಒತ್ತಿಹೇಳಿದೆ.
ಈ ತೀರ್ಪಿನ ಮೂಲಕ ಸರ್ವೋಚ್ಚ ನ್ಯಾಯಾಲಯವು ಕಾನೂನು ವಿದ್ಯಾರ್ಥಿಗಳ ಶೈಕ್ಷಣಿಕ ಸ್ವಾತಂತ್ರ್ಯವನ್ನು ಹಾಗೂ ವಿಶ್ವವಿದ್ಯಾಲಯಗಳ ಸ್ವಾಯತ್ತತೆಯನ್ನು ಎತ್ತಿಹಿಡಿದಿದ್ದು, ನಿಯಂತ್ರಕ ಸಂಸ್ಥೆಗಳು ತಮ್ಮ ಲಕ್ಷ್ಮಣ ರೇಖೆಯನ್ನು ಮೀರಿ ನಡೆದುಕೊಳ್ಳದಂತೆ ಕಟ್ಟುನಿಟ್ಟಿನ ಸಂದೇಶವನ್ನು ರವಾನಿಸಿದೆ.

