HEALTH TIPS

SIR ಕರಡು ಮತದಾರರ ಪಟ್ಟಿ: ಕಳೆದ ಮೂರು ವರ್ಷಗಳಲ್ಲಿ ಚುನಾವಣೆ ನಡೆದ ರಾಜ್ಯಗಳಲ್ಲೇ ಅತ್ಯಧಿಕ ಹೆಸರು ಡಿಲೀಟ್; ವರದಿ

ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆಯ (SIR) ಮೂರನೇ ಹಂತದ ಕರಡು ಮತದಾರರ ಪಟ್ಟಿ ಬಿಡುಗಡೆಯಾಗಿದ್ದು, 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 6.15 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಂತಿಮ ಮತದಾರರ ಪಟ್ಟಿ ಪ್ರಕಟವಾದಾಗ ಈ ಅಂಕಿ-ಅಂಶಗಳು ಬದಲಾಗುವ ಸಾಧ್ಯತೆಯಿದೆ.


ಆದರೆ ಕರಡು ಪಟ್ಟಿಯ ಪ್ರಕಾರ, ಅತಿ ಹೆಚ್ಚು ಹೆಸರು ಡಿಲೀಟ್ ಆಗಿರುವ ಮೊದಲ ಐದು ರಾಜ್ಯಗಳಲ್ಲಿ ಕಳೆದ ಮೂರು ವರ್ಷಗಳಲ್ಲಷ್ಟೇ ವಿಧಾನಸಭೆ ಚುನಾವಣೆಗಳು ನಡೆದಿವೆ. ಅವುಗಳೆಂದರೆ ಮಹಾರಾಷ್ಟ್ರ (2024), ಕರ್ನಾಟಕ (2023), ತೆಲಂಗಾಣ (2023), ದಿಲ್ಲಿ (2025) ಮತ್ತು ಆಂಧ್ರಪ್ರದೇಶ (2024) ಎಂದು thewire.in ವರದಿ ಮಾಡಿದೆ.

ಶೇಕಡಾವಾರು ಆಧಾರದಲ್ಲೂ ಅತಿ ಹೆಚ್ಚು ಹೆಸರು ಡಿಲೀಟ್ ಮಾಡಲಾದ ಮೊದಲ ಐದು ರಾಜ್ಯಗಳಲ್ಲೂ ಕಳೆದ ಮೂರು ವರ್ಷಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿವೆ. ದಿಲ್ಲಿಯಲ್ಲಿ ಅತಿ ಹೆಚ್ಚು (ಶೇ. 32.78) ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ನಂತರದ ಸ್ಥಾನಗಳಲ್ಲಿ ದಾದ್ರಾ ಮತ್ತು ನಾಗರ ಹವೇಲಿ ಹಾಗೂ ದಮನ್ ಮತ್ತು ದಿಯು (ಶೇ. 29.65), ತೆಲಂಗಾಣ (ಶೇ. 21.69), ಮಹಾರಾಷ್ಟ್ರ (ಶೇ. 21.14), ಕರ್ನಾಟಕ (ಶೇ. 19.48) ಮತ್ತು ಅರುಣಾಚಲ ಪ್ರದೇಶ (ಶೇ. 19.09) ಇವೆ. ದಾದ್ರಾ ಮತ್ತು ನಾಗರ ಹವೇಲಿ ಹಾಗೂ ದಮನ್ ಮತ್ತು ದಿಯು ಎರಡನೇ ಅತಿ ಹೆಚ್ಚು ಶೇಕಡಾವಾರು ಡಿಲೀಷನ್ ಕಂಡಿದ್ದರೂ, ಇದು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ವಿಧಾನಸಭೆಯನ್ನು ಹೊಂದಿಲ್ಲ. (2020ರಲ್ಲಿ ಒಂದೇ ಲೋಕಸಭಾ ಕ್ಷೇತ್ರವಾಗಿ ವಿಲೀನಗೊಳಿಸಲಾಗಿದೆ). ಆದರೆ ಇಲ್ಲಿ 2024ರಲ್ಲಿ ಲೋಕಸಭಾ ಚುನಾವಣೆ ನಡೆದಿತ್ತು.

ಅತಿ ಹೆಚ್ಚು ಹೆಸರು ಡಿಲೀಟ್ ಆಗಿದ್ದು ಮಹಾರಾಷ್ಟ್ರದಲ್ಲಿ:

ಮಹಾರಾಷ್ಟ್ರದಲ್ಲಿ ಡಿಲೀಟ್ ಆಗಿರುವ ಮತದಾರರ ಸಂಖ್ಯೆ (ಸಂಖ್ಯೆಯ ಆಧಾರದಲ್ಲಿ ಅತ್ಯಧಿಕ) 2024ರ ಒಟ್ಟು ಮತದಾರರ ಸಂಖ್ಯೆಯ ಸುಮಾರು ಮೂರನೇ ಒಂದರಷ್ಟಿದೆ. ಎರಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ, 2023ರ ಚುನಾವಣೆಯಲ್ಲಿ ಮತ ಚಲಾಯಿಸಿದವರ ಪೈಕಿ ಸುಮಾರು ಅರ್ಧದಷ್ಟು ಸಂಖ್ಯೆಯ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಮೂರನೇ ಸ್ಥಾನದಲ್ಲಿರುವ ಹಾಗೂ ಅದೇ ವರ್ಷ ಚುನಾವಣೆ ಕಂಡ ತೆಲಂಗಾಣದಲ್ಲಿ, ಅಂದು ಮತ ಚಲಾಯಿಸಿದವರ ಪೈಕಿ ಮೂರನೇ ಒಂದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದ ಮತದಾರರನ್ನು ಡಿಲೀಟ್ ಮಾಡಲಾಗಿದೆ.

ಈ ಮಟ್ಟದ ಡಿಲೀಷನ್‌ಗಳು, ಎಸ್‌ಐಆರ್ ಪ್ರಕ್ರಿಯೆಗೆ ಮುನ್ನ ಇದ್ದ ಮತದಾರರ ಪಟ್ಟಿಯ ಅಧಿಕೃತತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ 'ಅನರ್ಹ' ಮತದಾರರಿದ್ದರೆ, ಪ್ರಸ್ತುತ ಅಧಿಕಾರದಲ್ಲಿರುವ ಸರ್ಕಾರಗಳನ್ನು ಆಯ್ಕೆ ಮಾಡಿದ ಇತ್ತೀಚಿನ ಚುನಾವಣೆಗಳಲ್ಲಿ ಅವರು ಮತ ಚಲಾಯಿಸಲು ಹೇಗೆ ಅರ್ಹರಾದರು?

"ಮತದಾರರ ಪಟ್ಟಿಗಳು ಒಂದೇ ದಿನದಲ್ಲಿ ದೋಷಪೂರಿತವಾಗುವುದಿಲ್ಲ. ಎಸ್‌ಐಆರ್ ಪ್ರಕ್ರಿಯೆಯು ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂಬುದನ್ನು ಇದು ಮತ್ತೊಮ್ಮೆ ತೋರಿಸುತ್ತದೆ. ಹೆಸರುಗಳ ಸೇರ್ಪಡೆ ಮತ್ತು ಡಿಲೀಟ್ ಮಾಡುವ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆಯ ಕೊರತೆಯಿದೆ. ಬೋಗಸ್ ಮತದಾರರು ಒಂದೇ ದಿನದಲ್ಲಿ ಬರುವುದಿಲ್ಲ, ಆದರೆ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಅವರು ಮತ ಚಲಾಯಿಸಿದಂತೆ ಕಾಣುತ್ತಿದೆ" ಎಂದು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಷಿ ಹೇಳಿದ್ದಾರೆ.

ಎಸ್‌ಐಆರ್ ನ ಮೂರನೇ ಹಂತವನ್ನು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಾಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಹರ್ಯಾಣ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ದಿಲ್ಲಿ, ಒಡಿಶಾ, ಪಂಜಾಬ್, ಸಿಕ್ಕಿಂ, ತ್ರಿಪುರಾ, ತೆಲಂಗಾಣ, ಉತ್ತರಾಖಂಡ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗಿತ್ತು. ಇವುಗಳಲ್ಲಿ ನಾಗಾಲ್ಯಾಂಡ್ ಮತ್ತು ತ್ರಿಪುರಾದ ಕರಡು ಪಟ್ಟಿಗಳು ಇನ್ನಷ್ಟೇ ಪ್ರಕಟವಾಗಬೇಕಿದೆ. ಈಗಾಗಲೇ ಕರಡು ಪಟ್ಟಿ ಪ್ರಕಟವಾಗಿರುವ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 6,15,07,245 ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಲೀಟ್ ಆದವರೆಲ್ಲರೂ ಮತ ಚಲಾಯಿಸಿರಲಿಕ್ಕಿಲ್ಲ. ಆದರೆ, ಈ ಚುನಾವಣೆಗಳಲ್ಲಿ ಮತ ಚಲಾಯಿಸಿದವರ ಒಟ್ಟು ಸಂಖ್ಯೆಯನ್ನು ಗಮನಿಸಿದಾಗ ಈ ಡಿಲೀಷನ್‌ನ ಪ್ರಮಾಣ ಎಷ್ಟು ದೊಡ್ಡದು ಎಂಬುದು ಸ್ಪಷ್ಟವಾಗುತ್ತದೆ. ಉದಾಹರಣೆಗೆ, 2.06 ಕೋಟಿ ಹೆಸರುಗಳನ್ನು ತೆಗೆದುಹಾಕುವ ಮೂಲಕ ಮಹಾರಾಷ್ಟ್ರವು ಅತ್ಯಧಿಕ ಸಂಖ್ಯೆಯ ಒಟ್ಟು ಡಿಲೀಷನ್ ದಾಖಲಿಸಿದೆ. ಭಾರತೀಯ ಚುನಾವಣಾ ಆಯೋಗದ ಮತದಾನ ಪ್ರಮಾಣದ ದತ್ತಾಂಶದ ಪ್ರಕಾರ, 2024ರಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದಾಗ 6.41 ಕೋಟಿ ಮತದಾರರು ಮತ ಚಲಾಯಿಸಿದ್ದರು. ಅಂದರೆ, ಡಿಲೀಟ್ ಆಗಿರುವ ಹೆಸರುಗಳ ಸಂಖ್ಯೆ 2024ರ ಒಟ್ಟು ಮತದಾರರ ಮೂರನೇ ಒಂದಕ್ಕಿಂತ ಸ್ವಲ್ಪ ಕಡಿಮೆಯಿದೆ.

1.07 ಕೋಟಿ ನೋಂದಾಯಿತ ಹೆಸರುಗಳನ್ನು ಡಿಲೀಟ್ ಮಾಡುವ ಮೂಲಕ ಕರ್ನಾಟಕವು ಎರಡನೇ ಅತ್ಯಧಿಕ ಡಿಲೀಷನ್ ದಾಖಲಿಸಿದೆ. 2023ರಲ್ಲಿ 3.88 ಕೋಟಿ ಮತದಾರರು ಮತ ಚಲಾಯಿಸಿದ್ದು, ಈ ವೇಳೆ ಡಿಲೀಟ್ ಆದವರ ಸಂಖ್ಯೆಯು ಅಂದು ಮತ ಚಲಾಯಿಸಿದ ಒಟ್ಟು ಮತದಾರರಲ್ಲಿ ಸುಮಾರು ಅರ್ಧದಷ್ಟಿದೆ.

2023ರಲ್ಲೇ ಚುನಾವಣೆ ಕಂಡ ತೆಲಂಗಾಣವು ಮೂರನೇ ಅತ್ಯಧಿಕ ಡಿಲೀಷನ್ ದಾಖಲಿಸಿದೆ. ಅಲ್ಲಿ ಒಟ್ಟು 3.38 ಕೋಟಿ ಮತದಾರರಲ್ಲಿ 73.39 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದು 2023ರ ಚುನಾವಣೆಯಲ್ಲಿ ಮತ ಚಲಾಯಿಸಿದ 2.32 ಕೋಟಿ ಮತದಾರರಲ್ಲಿ ಮೂರನೇ ಒಂದಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದ್ದಾಗಿದೆ.

2025ರಲ್ಲಿ ಚುನಾವಣೆ ನಡೆಸಿದ ದಿಲ್ಲಿಯಲ್ಲಿಯೂ ದೊಡ್ಡ ಮಟ್ಟದ ಡಿಲೀಷನ್ ಕಂಡುಬಂದಿದೆ. ಇದುವರೆಗೆ 1.45 ಕೋಟಿ ಮತದಾರರನ್ನು ಹೊಂದಿದ್ದ ಮತದಾರರ ಪಟ್ಟಿಯಿಂದ 47.56 ಲಕ್ಷ ಮತದಾರರನ್ನು ಡಿಲೀಟ್ ಮಾಡುವ ಮೂಲಕ ದಿಲ್ಲಿ ನಾಲ್ಕನೇ ಅತ್ಯಧಿಕ ಒಟ್ಟು ಡಿಲೀಷನ್ ದಾಖಲಿಸಿದೆ. 2024ರ ಲೋಕಸಭಾ ಚುನಾವಣೆ ಜೊತೆಯಲ್ಲೇ ವಿಧಾನಸಭೆ ಚುನಾವಣೆ ನಡೆದ ಆಂಧ್ರಪ್ರದೇಶದಲ್ಲೂ 44.89 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.

ಈ 17 ರಾಜ್ಯಗಳಲ್ಲಿ ಆಗಿರುವ ಶೇಕಡಾವಾರು ಡಿಲೀಷನ್ ಅನ್ನು ವಿಶ್ಲೇಷಿಸಿದಾಗ, ದಿಲ್ಲಿ ಅತ್ಯಧಿಕ ಶೇಕಡಾವಾರು ಡಿಲೀಷನ್ ಕಂಡಿದೆ. ವಿಧಾನಸಭೆ ಚುನಾವಣೆ ಮುಗಿದ ಕೇವಲ ಒಂದೂವರೆ ವರ್ಷದ ನಂತರ ದೆಹಲಿಯಲ್ಲಿ ಶೇ. 32.78ರಷ್ಟು ಹೆಸರುಗಳು ಡಿಲೀಟ್ ಆಗಿವೆ. ದಾದ್ರಾ ಮತ್ತು ನಾಗರ ಹವೇಲಿ ಹಾಗೂ ದಮನ್ ಮತ್ತು ದಿಯು ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ಗಾತ್ರವು ಶೇ. 29.65ರಷ್ಟು ಕುಗ್ಗಿದೆ. ಈ ಕೇಂದ್ರಾಡಳಿತ ಪ್ರದೇಶಗಳು ವಿಧಾನಸಭೆ ಚುನಾವಣೆಯನ್ನು ನಡೆಸುವುದಿಲ್ಲ ಹಾಗೂ ಎರಡೂ ಸೇರಿ ಒಂದೇ ಸಂಸದೀಯ ಕ್ಷೇತ್ರವನ್ನು ಹೊಂದಿವೆ.

'ಹೆಚ್ಚಿನ ಡಿಲೀಷನ್' ಕಂಡ ರಾಜ್ಯಗಳೇ ವಿವಾದದ ಕೇಂದ್ರಬಿಂದು

ಈ ರಾಜ್ಯಗಳ ಪೈಕಿ ದಿಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕಗಳು ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳಿಂದ ವಿವಾದದ ಕೇಂದ್ರಬಿಂದುವಾಗಿವೆ.

ಫೆಬ್ರವರಿಯಲ್ಲಿ ನಡೆದ ದಿಲ್ಲಿ ಚುನಾವಣೆಗೆ ಮುನ್ನ, ಆಮ್ ಆದ್ಮಿ ಪಾರ್ಟಿ ಮತ್ತು ಬಿಜೆಪಿ ಎರಡೂ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದವು. ಹೊಸದಿಲ್ಲಿ ಕ್ಷೇತ್ರದಲ್ಲಿ ಹೊಸ ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ಎಎಪಿ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಕೇಂದ್ರ ಸಚಿವರ ಮನೆಗಳಲ್ಲಿ ಹಲವು ಮತದಾರರು ವಾಸಿಸುತ್ತಿದ್ದಾರೆ ಎಂದು ದಿಲ್ಲಿ ಚುನಾವಣೆಗೆ ಮುನ್ನವೇ ಚುನಾವಣಾ ಆಯೋಗದ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಎಪಿ ಆರೋಪಿಸಿತ್ತು. ಇನ್ನೊಂದೆಡೆ, ಎಎಪಿಯು ದಿಲ್ಲಿಯಲ್ಲಿ ಮತದಾರರ ಪಟ್ಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಮತ್ತು 40ರಿಂದ 80 ವರ್ಷ ವಯಸ್ಸಿನ ಹೊಸ ಮತದಾರರನ್ನು ಸೃಷ್ಟಿಸುತ್ತಿದೆ ಎಂದು ಬಿಜೆಪಿಯೂ ಆರೋಪಿಸಿತ್ತು.

ಕಳೆದ ಆಗಸ್ಟ್‌ನಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ 1,00,000ಕ್ಕೂ ಹೆಚ್ಚು ಮತಗಳನ್ನು "ಕದಿಯಲಾಗಿದೆ" ಎಂದಿದ್ದು, ಚುನಾವಣಾ ಆಯೋಗ ಮತ್ತು ಬಿಜೆಪಿ ಇದರಲ್ಲಿ ಶಾಮೀಲಾಗಿವೆ ಎಂದು ಆರೋಪಿಸಿದ್ದರು

ರಾಹುಲ್ ಗಾಂಧಿ ಅವರ ಆರೋಪಗಳನ್ನು ತಳ್ಳಿಹಾಕಿದ್ದ ಚುನಾವಣಾ ಆಯೋಗವು,,ತಮ್ಮ ಆರೋಪಗಳು ಸತ್ಯವೆಂದು ಭಾವಿಸಿದರೆ ಪ್ರಮಾಣಪತ್ರದ ಮೂಲಕ ಸಲ್ಲಿಸುವಂತೆ ಸೂಚಿಸಿತ್ತು. "ಒಂದು ವೇಳೆ ಅದು ಸತ್ಯವಲ್ಲದಿದ್ದರೆ, ಇಂತಹ ವಿಚಿತ್ರ ತೀರ್ಮಾನಗಳಿಗೆ ಬರುವುದನ್ನು ಮತ್ತು ಭಾರತದ ನಾಗರಿಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಬೇಕು" ಎಂದು ಹೇಳಿತ್ತು.

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆಯು ಹಕ್ಕುಗಳು ಮತ್ತು ಆಕ್ಷೇಪಣೆಗಳ ಹಂತವನ್ನು ತಲುಪುತ್ತಿದ್ದಂತೆ, 1 ಲಕ್ಷಕ್ಕೂ ಹೆಚ್ಚು ನಕಲಿ ಮತದಾರರಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಮನ್ಸೂರ್ ಅಲಿ ಖಾನ್ ನೀಡಿದ್ದ ದೂರನ್ನು ಕರ್ನಾಟಕ ಚುನಾವಣಾ ಸಂಸ್ಥೆಯು ಚುನಾವಣಾ ಆಯೋಗಕ್ಕೆ ರವಾನಿಸಿದೆ. ಇದರೊಂದಿಗೆ ಒಂದು ವರ್ಷದ ನಂತರ ಈ ವಿಷಯವು ಮತ್ತೆ ಚುನಾವಣಾ ಆಯೋಗದ ಬಾಗಿಲಿಗೆ ತಲುಪಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ, ಎಸ್‌ಐಆರ್ ಪ್ರಕ್ರಿಯೆ ಆರಂಭವಾಗುವ ಮುನ್ನವೇ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA) ನಾಯಕರೊಂದಿಗೆ ಸೇರಿ ರಾಜ್ಯದ ಮತದಾರರ ಪಟ್ಟಿಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದರು. ಮಹಾರಾಷ್ಟ್ರದ ವಯಸ್ಕ ಜನಸಂಖ್ಯೆಗಿಂತ ಮತದಾರರ ಸಂಖ್ಯೆ ಹೆಚ್ಚಿರುವುದು ಹೇಗೆ ಎಂದು ಪ್ರಶ್ನಿಸಿದ್ದರು.

ಶಿವಸೇನಾ (ಯುಬಿಟಿ) ಸಂಸದ ಸಂಜಯ್ ರಾವತ್ ಮತ್ತು ಎನ್‌ಸಿಪಿ (ಎಸ್.ಪಿ) ಸಂಸದೆ ಸುಪ್ರಿಯಾ ಸುಳೆ ಅವರೊಂದಿಗೆ ಮಾತನಾಡಿದ್ದ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ 2019ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆ ನಡುವೆ 32 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ. ಆದರೆ 2024ರ ಲೋಕಸಭಾ ಚುನಾವಣೆ ಮತ್ತು 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ನಡುವಿನ ಕೇವಲ ಐದು ತಿಂಗಳಲ್ಲೇ 39 ಲಕ್ಷ ಮತದಾರರು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದ್ದರು.

ಮಹಾರಾಷ್ಟ್ರದ ಕರಡು ಪಟ್ಟಿ ಬಿಡುಗಡೆಯಾದ ನಂತರ, ರಾಹುಲ್ ಗಾಂಧಿ ಅವರು 'ಎಕ್ಸ್' ನಲ್ಲಿ ಈ ಅಂಕಿ-ಅಂಶಗಳನ್ನು ಮತ್ತೆ ಉಲ್ಲೇಖಿಸಿ, "ಲೋಕಸಭೆ 2024: 9.29 ಕೋಟಿ, ವಿಧಾನಸಭೆ 2024: 9.7 ಕೋಟಿ, ಎಸ್‌ಐಆರ್ 2026: 7.78 ಕೋಟಿ - ಇದರಲ್ಲಿ ಯಾವ ಪಟ್ಟಿ ಸರಿಯಾಗಿತ್ತು?" ಎಂದು ಪ್ರಶ್ನಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries