HEALTH TIPS

ಭವಿಷ್ಯದ ಕೃತಕ ಬುದ್ಧಿಮತ್ತೆ ಮನುಕುಲಕ್ಕೆ ಮಾರಕವಾಗಬಹುದು: Open AI ಮುಖ್ಯ ವಿಜ್ಞಾನಿಯ ಎಚ್ಚರಿಕೆ

ನವದೆಹಲಿ:  ಕೃತಕ ಬುದ್ಧಿಮತ್ತೆಯು (AI) ಅಭಿವೃದ್ಧಿಗೊಳ್ಳುತ್ತಿರುವ ವೇಗದ ಬಗ್ಗೆ ಕಳವಳ ವ್ಯಕ್ತಪಡಿಸಿರುವ Open AI ಮುಖ್ಯ ವಿಜ್ಞಾನಿ ಜಾಕುಬ್ ಪಚೋಕಿ ಅವರು, ಅತ್ಯಂತ ಮುಂದುವರಿದ AI ವ್ಯವಸ್ಥೆಗಳು ಭವಿಷ್ಯದಲ್ಲಿ ಮನುಷ್ಯರನ್ನು ಮೋಸಗೊಳಿಸುವುದು, ಚೌಕಾಶಿ ನಡೆಸುವುದು ಅಥವಾ ಬ್ಲ್ಯಾಕ್ಮೇಲ್ ನಂತಹ ತಂತ್ರಗಳನ್ನು ಬಳಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ. 


ಮಾನವನ ನಿಯಂತ್ರಣದಲ್ಲಿರಿಸಲು ಇನ್ನೂ ಸೂಕ್ತ ಸುರಕ್ಷತಾ ಕ್ರಮಗಳಿಲ್ಲದಿದ್ದರೂ, ಮನುಕುಲವು ಅತ್ಯಂತ ಸಮರ್ಥ ಯಂತ್ರಗಳ ಭವಿಷ್ಯದತ್ತ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಸೆ. 6ರಂದು ಪ್ರಕಟವಾದ 'ಆಯನ್ ಏಲಿಯನ್ ಮೈಂಡ್' ಎಂಬ ಬ್ಲಾಗ್ ಪೋಸ್ಟ್ ನಲ್ಲಿ ಪಚೋಕಿ, ತಾರ್ಕಿಕ ಮಾದರಿಗಳ ತ್ವರಿತ ಪ್ರಗತಿ ಮತ್ತು ಹೆಚ್ಚಿನ ಕೆಲಸಗಳಲ್ಲಿ ಯಂತ್ರಗಳು ಮಾನವರನ್ನು ಮೀರಿಸುವ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿದ್ದಾರೆ. AI ವ್ಯವಸ್ಥೆಗಳು ಕೇವಲ ಪರಿಕರಗಳಾಗಿರದೆ, ತಮ್ಮದೇ ಆದ ಉದ್ದೇಶಗಳನ್ನು ಸಾಧಿಸಲು ಮನುಷ್ಯರೊಂದಿಗೆ ರಾಜಿ ಮಾಡಿಕೊಳ್ಳುವುದು ಅಥವಾ ಬ್ಲ್ಯಾಕ್ ಮೇಲ್ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬಹುದು. ಶಕ್ತಿಶಾಲಿ AI ವ್ಯವಸ್ಥೆಗಳ ಕಡೆಗೆ ಸಾಗುವ ಬದಲಾವಣೆಯು ಮಾನವ ಸ್ವಾತಂತ್ರ್ಯ ಮತ್ತು ಅಧಿಕಾರಕ್ಕೆ ಧಕ್ಕೆ ತರುವಂತಾಗಬಾರದು ಎನ್ನುವುದು ಪ್ರಮುಖವಾಗಿ ಗಮನ ಹರಿಸಬೇಕಾದ ಅಂಶವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಜಗತ್ತಿನ ಯಾವುದೇ AI ಪ್ರಯೋಗಾಲಯವು AI ಸುರಕ್ಷತೆ ಮತ್ತು ನಿಯಂತ್ರಣವನ್ನು ಸಂಪೂರ್ಣವಾಗಿ ಪರಿಹರಿಸಿಲ್ಲ ಎಂದು ಬರೆದಿರುವ ಪಚೋಕಿ, ಸಾಮಾನ್ಯ ಸುರಕ್ಷತಾ ಮಾನದಂಡಗಳು ಜಾರಿಗೆ ಬರುವವರೆಗೆ AI ತಂತ್ರಜ್ಞಾನದ ಅಭಿವೃದ್ಧಿಯನ್ನು ಸ್ವಯಂಪ್ರೇರಿತವಾಗಿ ನಿಧಾನಗೊಳಿಸಬೇಕು ಎಂದು ಅಭಿಪ್ರಾಯಿಸಿದ್ದಾರೆ.

ಪಚೋಕಿ ಅವರ ಕಳವಳಗಳು ಉದ್ಯೋಗಗಳು ಮತ್ತು ಉತ್ಪಾದಕತೆಯ ಮೇಲಿನ AI ಪ್ರಭಾವದಾಚೆಗೂ ವಿಸ್ತರಿಸಿವೆ. ಸುಧಾರಿತ ವ್ಯವಸ್ಥೆಗಳು ಕಂಪ್ಯೂಟರ್ ಗಳನ್ನು ನಿರ್ವಹಿಸಬಲ್ಲ, ಜನರು ಮತ್ತು ಇತರ AI ವ್ಯವಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಬಲ್ಲ ಮತ್ತು ಹೆಚ್ಚುತ್ತಿರುವ ಸ್ವಾಯತ್ತತೆಯೊಂದಿಗೆ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳಬಲ್ಲ ಭವಿಷ್ಯವನ್ನು ಅವರು ಬಣ್ಣಿಸಿದ್ದಾರೆ.

ಹೆಚ್ಚು ಸಮರ್ಥ ಯಂತ್ರಗಳನ್ನು ಅಭಿವೃದ್ಧಿಪಡಿಸುವುದಷ್ಟೇ ಅಲ್ಲ, ತಂತ್ರಜ್ಞಾನದ ಸಾಮರ್ಥ್ಯಗಳು ವಿಸ್ತರಿಸಿದಂತೆ ಮಾನವರು ಅದನ್ನು ನಿರ್ದೇಶಿಸಲು ಮತ್ತು ನಿಯಂತ್ರಿಸಲು ಸಾಧ್ಯವಾಗುವಂತೆ ನೋಡಿಕೊಳ್ಳುವುದು ನಿಜವಾದ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.

'ನಾವು ನಂಬಲಾಗದಷ್ಟು ಬುದ್ಧಿವಂತ ಯಂತ್ರಗಳಿರುವ ಜಗತ್ತಿಗೆ ಪರಿವರ್ತನೆಯನ್ನು ನೋಡುತ್ತಿದ್ದೇವೆ' ಎಂದಿರುವ ಪಚೋಕಿ, AI ಹೆಚ್ಚು ಕೆಲಸಗಳನ್ನು ಮಾಡಲು ಸಮರ್ಥವಾಗುತ್ತಿದ್ದಂತೆ ಮಾನವ ಸ್ವಾತಂತ್ರ್ಯವನ್ನು ಕಾಪಾಡುವುದು ಮುಖ್ಯ ಆದ್ಯತೆಯಾಗಬೇಕು ಎಂದು ವಾದಿಸಿದ್ದಾರೆ.

'ಏಲಿಯನ್ ಇಂಟಲೆಕ್ಟ್' (ಮಾನವ ಬುದ್ಧಿಮತ್ತೆಯನ್ನು ಮೀರಿಸುವ ಅನ್ಯ ಬುದ್ಧಿಮತ್ತೆ) ಮಾನವ ಸಾಮರ್ಥ್ಯಗಳನ್ನು ಮೀರುವ ಸಾಧ್ಯತೆಯ ಬಗ್ಗೆಯೂ ಎಚ್ಚರಿಸಿರುವ ಅವರು, ನಿಯಂತ್ರಣರಹಿತ ತಂತ್ರಜ್ಞಾನ ಪ್ರಗತಿಯು ಜನರನ್ನು ಹಿಂದೆ ಉಳಿಸಬಹುದು ಎಂದು ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries