ನವದೆಹಲಿ: 'ವೈವಾಹಿಕ ಅತ್ಯಾಚಾರ'ವನ್ನು ಅಪರಾಧ ಎಂದು ಪರಿಗಣಿಸುವ ಕಾನೂನು ಸಿಂಧುತ್ವದ ವಿಚಾರವಾಗಿ ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ (ಸುಪ್ರೀಂ ಕೋರ್ಟ್) ಮಹತ್ವದ ವಿಚಾರಣೆ ಆರಂಭವಾಗಿದೆ.
ಅಪ್ರಾಪ್ತ ವಯಸ್ಕಳಲ್ಲದ ಹೆಂಡತಿಯೊಂದಿಗೆ ಬಲವಂತವಾಗಿ ಲೈಂಗಿಕ ಸಂಪರ್ಕ ನಡೆಸಿದಲ್ಲಿ, ಅತ್ಯಾಚಾರ ಅಪರಾಧದ ಕಾನೂನು ಕ್ರಮಗಳಿಂದ ಪತಿಯು ವಿನಾಯಿತಿ ಪಡೆಯಬಹುದೇ ಎಂಬ ಪ್ರಶ್ನೆ ಎತ್ತಿರುವ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆಗೆ ಪರಿಗಣಿಸಿದೆ.
ಪತಿ, ಪತ್ನಿಯ ಸಮ್ಮತಿಯಿಲ್ಲದೆ ಆಕೆಯ ಮೇಲೆ ಬಲವಂತದ ಲೈಂಗಿಕ ದೌರ್ಜನ್ಯ ಎಸಗಿದರೆ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376ರ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬಹುದು ಎಂದು ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಈ ಮಹತ್ವದ ಪ್ರಶ್ನೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ, ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠವು, ವೈವಾಹಿಕ ಅತ್ಯಾಚಾರಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ. 'ಅರ್ಜಿಗಳ ವಿಚಾರಣೆ ದಿನಾಂಕವನ್ನು ತಿಳಿಸಲಿದ್ದೇವೆ' ಎಂದು ಸಿಜೆಐ ಬುಧವಾರ ತಿಳಿಸಿದ್ದಾರೆ.
ಸಂತ್ರಸ್ತೆಯರ ರಕ್ಷಣೆ ಮೊದಲ ಆದ್ಯತೆ:
ವಿಚಾರಣೆ ವೇಳೆ ಮಾತನಾಡಿದ ನ್ಯಾಯಮೂರ್ತಿ ಬಾಗ್ಚಿ, 'ವೈವಾಹಿಕ ಅತ್ಯಾಚಾರ'ವನ್ನು ಅಪರಾಧ ಎಂದು ಪರಿಗಣಿಸುವ ಕಾನೂನು ಸಿಂಧುತ್ವದ ಬಗ್ಗೆ ನಾವು ಅಂತಿಮ ತೀರ್ಮಾನಕ್ಕೆ ಬರುವವರೆಗೆ, ಪತಿಯ ವಿರುದ್ಧ ಅಪರಾಧ ವಿಚಾರಣೆಗೆ ಅನುಮತಿ ನೀಡಬಹುದೇ? ಎಂದು ಪ್ರಶ್ನಿಸಿದರು. ವೈವಾಹಿಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಹಿಳೆಯರಿಗೆ ನಾವು ಖಂಡಿತವಾಗಿಯೂ ರಕ್ಷಣೆ ನೀಡುತ್ತೇವೆ. ಆದರೆ, ಕಾನೂನಿನಲ್ಲಿ ವಿನಾಯಿತಿಗೆ (ಐಪಿಸಿ ಸೆಕ್ಷನ್ 375 (ಈಗಿನ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 63 (2)), 'ವೈವಾಹಿಕ ಅತ್ಯಾಚಾರ'ವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದರಿಂದ ವಿನಾಯಿತಿ ಸ್ಪಷ್ಟ ಉಲ್ಲೇಖವಿರುವಾಗ, ಪ್ರಾಸಿಕ್ಯೂಷನ್ ಈ ರೀತಿ ಪ್ರಕರಣ ದಾಖಲಿಸಲು ಸಾಧ್ಯವೇ? ಎಂದು ಕೇಳಿದರು.
ಇಲ್ಲಿ 'ಸಂತ್ರಸ್ತೆ' ಎಂದು ಯಾರನ್ನು ಕರೆಯಲಾಗುತ್ತಿದೆ ಎಂಬುದು ತಮಗೆ ತಿಳಿಯುತ್ತಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದಾಗ, ಹಿರಿಯ ವಕೀಲ ಎನ್.ಎಸ್. ನಪ್ಪಿನೈ ಅವರ ವಾದದಂತೆ ವಿವಾಹದ ನಂತರ ಅವರ ಇಷ್ಟಕ್ಕೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯೇ ಸಂತ್ರಸ್ತೆ ಎಂದು ನ್ಯಾಯಮೂರ್ತಿ ಬಾಗ್ಚಿ ಸ್ಪಷ್ಟಪಡಿಸಿದರು.
ಸಾಮಾಜಿಕವಾಗಿ ಅಥವಾ ರಾಜ್ಯ ಸರ್ಕಾರವು ಈ ಕೃತ್ಯವನ್ನು 'ಅತ್ಯಾಚಾರ' ಎಂದು ಪರಿಗಣಿಸುತ್ತದೆಯೇ ಎಂಬುದು ಮಾತ್ರವೇ ಕೋರ್ಟ್ ಮುಂದಿರುವ ಏಕೈಕ ಪ್ರಶ್ನೆ ಎಂದು ನ್ಯಾಯಮೂರ್ತಿ ಉಲ್ಲೇಖಿಸಿದರು.
ಹಿರಿಯ ವಕೀಲರಾದ ಕರುಣಾ ನಂದಿ, ಇಂದಿರಾ ಜೈಸಿಂಗ್, ಗೋಪಾಲ್ ಶಂಕರನಾರಾಯಣನ್, ಎನ್.ಎಸ್. ನಪ್ಪಿನೈ, ಸಿದ್ಧಾರ್ಥ ದೇವ್, ಕಾಲಿನ್ ಗೊನ್ಸಾಲ್ವೆಸ್, ಮಹಾಲಕ್ಷ್ಮಿ ಪಾವನಿ ಮತ್ತು ಸಾಲಿಸಿಟರ್ ಜನರಲ್ ಅವರ ವಾದ ಆಲಿಸಿದ ಪೀಠವು, ಅಂತಿಮ ವಿಚಾರಣೆಗೆ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದೆ.
ಕೇಂದ್ರ ಸರ್ಕಾರದ ವಿರೋಧ:
ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಘೋಷಿಸುವುದಕ್ಕೆ ಕೇಂದ್ರ ಸರ್ಕಾರ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. ವಿವಾಹಿತ ಮಹಿಳೆಯರಿಗೆ ಲೈಂಗಿಕ ದೌರ್ಜನ್ಯದಿಂದ ರಕ್ಷಣೆ ನೀಡಲು ಈಗಾಗಲೇ ಪರ್ಯಾಯ ಕಾನೂನು ಮಾರ್ಗಗಳಿವೆ. ವಿವಾಹ ಬಂಧನದೊಳಗಿನ ಈ ಕೃತ್ಯವನ್ನು 'ಅತ್ಯಾಚಾರ' ಎಂದು ಪರಿಗಣಿಸುವುದು ಕಠಿಣ ಕ್ರಮವಾಗಬಹುದು ಹಾಗೂ ಇದು ಕುಟುಂಬ ವ್ಯವಸ್ಥೆಯ ಮೇಲೆಯೂ ಪರಿಣಾಮ ಬೀರಬಹುದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 'ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಆಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದ್ದು, ಶೀಘ್ರದಲ್ಲೇ ಅಂತಿಮ ವಿಚಾರಣೆಯ ದಿನಾಂಕವನ್ನು ಪ್ರಕಟಿಸುವುದಾಗಿ ತಿಳಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 375 (ಈಗಿನ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 63 (2)), 'ವೈವಾಹಿಕ ಅತ್ಯಾಚಾರ'ವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವುದರಿಂದ ವಿನಾಯಿತಿ ನೀಡುತ್ತದೆ. 'ಅಪ್ರಾಪ್ತ ವಯಸ್ಕಳಲ್ಲದ ಪತ್ನಿಯೊಂದಿಗಿನ ಲೈಂಗಿಕ ಸಂಪರ್ಕವು ಅತ್ಯಾಚಾರ ಅಲ್ಲ' ಎಂದು ಪ್ರತಿಪಾದಿಸುತ್ತದೆ.

