ಶಿಮ್ಲಾ: ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ರಿತು ನೇಗಿ ಸತತ ಮೂರು ಏಶ್ಯನ್ ಗೇಮ್ಸ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದು, ಎರಡು ಚಿನ್ನ ಹಾಗೂ ಒಂದು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. 2023ರ ಆವೃತ್ತಿಯ ಗೇಮ್ಸ್‌ನಲ್ಲಿ ಭಾರತದ ಮಹಿಳಾ ತಂಡವು ಚಿನ್ನದ ಪದಕ ಗೆಲ್ಲಲು ತಂಡದ ನಾಯಕತ್ವ ವಹಿಸಿದ್ದರು.
ಇತ್ತೀಚೆಗೆ ಜಪಾನ್‌ನಲ್ಲಿ ಕೊನೆಗೊಂಡಿರುವ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಭಾರತ ತಂಡದ ಭಾಗವಾಗಿದ್ದರು. ಅರ್ಜುನ ಪ್ರಶಸ್ತಿ ವಿಜೇತೆ ರಿತು ನೇಗಿ ತನ್ನ ತವರು ರಾಜ್ಯ ಹಿಮಾಚಲ ಪ್ರದೇಶದಲ್ಲಿ 1 ಕೋಟಿ.ರೂ. ಬಹುಮಾನದ ಪಟ್ಟಿಯಿಂದ ಕಡೆಗಣಿಸಲ್ಪಟ್ಟಿದ್ದಾರೆ.
ಭಾರತದ ಮಹಿಳೆಯರ ಕಬಡ್ಡಿ ತಂಡವು ಚಿನ್ನದ ಪದಕ ಗೆದ್ದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತಲಾ ಒಂದು ಕೋಟಿ ರೂ. ಬಹುಮಾನವನ್ನು ಅತ್ಲೀಟ್‌ಗಳಿಗೆ ಘೋಷಿಸಿದೆ. ಬಹುಮಾನ ವಿಜೇತರ ಪಟ್ಟಿಯಲ್ಲಿ ನೇಗಿ ಹೆಸರು ಕಾಣೆಯಾಗಿದೆ. ಈ ನಿರ್ಧಾರದಿಂದ ಹಿರಿಯ ಆಟಗಾರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಬೇರೊಂದು ರಾಜ್ಯಕ್ಕೆ ವಿವಾಹವಾಗಿ ಹೋದ ಕಾರಣಕ್ಕೆ ಕ್ರೀಡಾಪಟುವೊಬ್ಬರು ತನ್ನ ತವರು ರಾಜ್ಯದ ಗುರುತನ್ನು ಕಳೆದುಕೊಳ್ಳಬೇಕೇ? ಎಂದು ಪ್ರಶ್ನಿಸಿದ್ದಾರೆ.
ನೇಗಿ ಅವರು ಸಿರ್ಮೌರ್ ಜಿಲ್ಲೆಯ ಶಿಲೈ ಮೂಲದವರು. ಆದರೆ ಹರ್ಯಾಣದ ಪಾಣಿಪತ್‌ನಲ್ಲಿ ವಿವಾಹವಾಗಿದ್ದರು. 2023ರ ಏಶ್ಯನ್ ಗೇಮ್ಸ್‌ನಲ್ಲಿ ನೇಗಿ ನಾಯಕತ್ವದಲ್ಲಿ ಭಾರತದ ಮಹಿಳೆಯರ ಕಬಡ್ಡಿ ತಂಡವು ಚಿನ್ನದ ಪದಕ ಗೆದ್ದ ನಂತರ ಹಿಮಾಚಲ ಪ್ರದೇಶ ಸರಕಾರದಿಂದ ನಗದು ಬಹುಮಾನ ಸ್ವೀಕರಿಸಿದ್ದರು.
ಈ ಬಾರಿ ನೇಗಿ ಹೆಸರನ್ನು ಹೊರಗಿಡಲಾಗಿದ್ದು, ರಾಜ್ಯದ ಇತರ ಮೂವರು ಆಟಗಾರ್ತಿಯರನ್ನು ರಾಜ್ಯ ಸರಕಾರದ ಬಹುಮಾನದ ಪಟ್ಟಿಯಲ್ಲಿ ಸೇರಿಸಲಾಗಿದೆ.
''ಒಂದು ವಾರದ ಹಿಂದೆಯಷ್ಟೇ ನಾನು ಹಿಮಾಚಲ ಪ್ರದೇಶದ ಮಗಳಾಗಿದ್ದೆ. ಫೇಸ್‌ಬುಕ್‌ನಲ್ಲಿ ಮುಖ್ಯಮಂತ್ರಿಗಳು ಅಭಿನಂದನಾ ಸಂದೇಶ ಹಂಚಿಕೊಂಡಿದ್ದರು. ಮಾಜಿ ಸಿಎಂ ಜಯರಾಮ್ ಠಾಕೂರ್ ಹಾಗೂ ಸಂಸದ ಅನುರಾಗ್ ಠಾಕೂರ್ ಕೂಡ ನನಗೆ ಅಭಿನಂದನೆ ಸಲ್ಲಿಸಿದ್ದರು. ಎರಡು ದಿನಗಳ ಹಿಂದೆ ದಿಢೀರನೆ ಏನು ಬದಲಾವಣೆಯಾಗಿದೆಯೋ ನನಗೆ ಅರ್ಥವಾಗುತ್ತಿಲ್ಲ. ನನ್ನ ವೃತ್ತಿಜೀವನದ ಈ ಹಂತದಲ್ಲಿ ಹಿಮಾಚಲ ಪ್ರದೇಶ ಹೀಗೇಕೆ ವರ್ತಿಸುತ್ತಿದೆ? ಎಂದು ನೇಗಿ ಪ್ರಶ್ನಿಸಿದರು.
ನಾನು ಭಾರತೀಯ ರೈಲ್ವೆಯಲ್ಲಿ ಉದ್ಯೋಗದಲ್ಲಿದ್ದು, ದೇಶೀಯ ಸ್ಪರ್ಧಾವಳಿಯಲ್ಲಿ ಹರ್ಯಾಣದ ಬದಲಿಗೆ ಹಿಮಾಚಲ ಪ್ರದೇಶವನ್ನು ನಿರಂತರವಾಗಿ ಪ್ರತಿನಿಧಿಸುತ್ತಾ ಬಂದಿದ್ದೇನೆ ಎಂದು ನೇಗಿ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಚಿನ್ನದ ಪದಕ ವಿಜೇತ ಭಾರತದ ಮಹಿಳೆಯರ ಕಬಡ್ಡಿ ತಂಡದ ಭಾಗವಾಗಿದ್ದ ಪುಷ್ಪಾ ರಾಣಾ, ಜ್ಯೋತಿ ಠಾಕೂರ್ ಹಾಗೂ ಭಾವನಾ ಠಾಕೂರ್‌ಗೆ ತಲಾ 1 ಕೋ.ರೂ. ಬಹುಮಾನ ಘೋಷಿಸಿದ್ದರು. ಭಾರತೀಯ ಮಹಿಳೆಯರ ಕ್ರಿಕೆಟ್ ತಂಡದ ಆಟಗಾರ್ತಿ ರೇಣುಕಾ ಠಾಕೂರ್‌ಗೆ ಕೂಡ ಅವರ ಸಾಧನೆಯನ್ನು ಗುರುತಿಸಿ 1 ಕೋ.ರೂ. ಬಹುಮಾನ ಘೋಷಿಸಲಾಗಿತ್ತು.
ನಿರ್ಧಾರ ಪರಿಶೀಲಿಸುವ ಭರವಸೆ ನೀಡಿದ ಸರಕಾರ: ಪಟ್ಟಿಯಿಂದ ನೇಗಿ ಹೆಸರನ್ನು ಏಕೆ ತೆಗೆದುಹಾಕಲಾಗಿದೆ ಎಂಬ ಕುರಿತು ಹಿಮಾಚಲ ಪ್ರದೇಶ ಸರಕಾರ ಸಾರ್ವಕಾಲಿಕವಾಗಿ ವಿವರಣೆ ನೀಡಿಲ್ಲ.
ಬದಲಾವಣೆಯ ಹಿಂದಿನ ಕಾರಣ ನನಗೆ ಗೊತ್ತಿಲ್ಲ. ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವ ಮೊದಲು ಕಡತವನ್ನು ಪರಿಶೀಲಿಸುವೆ ಎಂದು ಕ್ರೀಡಾ ಸಚಿವ ಯದ್ವಿಂದರ್ ಗೊಮಾ ಹೇಳಿದ್ದಾರೆ.



