ನವದೆಹಲಿ: ರೈಲುಗಳಲ್ಲಿ ರಾತ್ರಿ 11ರಿಂದ ಬೆಳಗಿನ 5ರವರೆಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸುವಂತೆ ರೈಲ್ವೆ ಮಂಡಳಿ ಎಲ್ಲ ವಲಯ ರೈಲ್ವೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಪ್ರಯಾಣಿಕರೊಬ್ಬರು ಪವರ್ ಬ್ಯಾಂಕ್‌ನಲ್ಲಿ ಮೊಬೈಲ್ ಚಾರ್ಜ್ ಮಾಡುತ್ತಿದ್ದಾಗ ಅದು ಸ್ಫೋಟಗೊಂಡು ಮುಂಬೈ ಲೋಕಲ್ ರೈಲಿನ ಬೋಗಿಯಲ್ಲಿ ದಟ್ಟ ಹೊಗೆ ಆವರಿಸಿದ ಘಟನೆ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ 26ರಂದು ಹೊರಡಿಸಲಾದ ಪತ್ರದಲ್ಲಿ ನಿಗದಿತ ಅವಧಿಯಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಗಿತಗೊಳಿಸುವುದನ್ನು ಖಚಿತಪಡಿಸಬೇಕು ಎಂದು ಮಂಡಳಿ ತಿಳಿಸಿದೆ. ಈ ಹಿಂದೆ ನೀಡಲಾಗಿದ್ದ ಸೂಚನೆಗಳ ಅನುಷ್ಠಾನದಲ್ಲಿ ರೈಲು ಸಿಬ್ಬಂದಿಯಿಂದ ಲೋಪಗಳಾಗಿರುವುದನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸಿಬ್ಬಂದಿಗೆ ತರಬೇತಿ, ಅಧಿಕಾರಿಗಳಿಂದ ದಿಢೀರ್ ತಪಾಸಣೆ
ರಾತ್ರಿ 11ರಿಂದ ಬೆಳಗಿನ 5ರವರೆಗಿನ ಆರು ಗಂಟೆಗಳ ಅವಧಿಯಲ್ಲಿ ಎಲ್ಲ ಬೋಗಿಗಳ ಚಾರ್ಜಿಂಗ್ ಪಾಯಿಂಟ್‌ಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ವಲಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಈ ಕುರಿತು ಸಿಬ್ಬಂದಿಗೆ ಅರಿವು ಮೂಡಿಸುವುದರ ಜೊತೆಗೆ ಅಗತ್ಯ ತರಬೇತಿಯನ್ನೂ ನೀಡಬೇಕು ಎಂದು ತಿಳಿಸಲಾಗಿದೆ.
ನಿಯಮ ಪಾಲನೆಯಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳು ಮತ್ತು ಮೇಲ್ವಿಚಾರಕರು ದಿಢೀರ್ ತಪಾಸಣೆ ನಡೆಸಬೇಕು. ಸುರಕ್ಷತಾ ಕ್ರಮಗಳ ಅನುಷ್ಠಾನದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸುವುದಿಲ್ಲ ಎಂದು ರೈಲ್ವೆ ಮಂಡಳಿ ಎಚ್ಚರಿಕೆ ನೀಡಿದೆ.
2014ರಿಂದಲೇ ಜಾರಿಯಲ್ಲಿರುವ ನಿಯಮ
ರೈಲುಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಬಳಕೆಗೆ ಸಂಬಂಧಿಸಿದ ಈ ನಿರ್ಬಂಧವು 2014ರ ಜೂನ್ 19ರಿಂದಲೇ ಜಾರಿಯಲ್ಲಿದೆ. ಬೆಂಗಳೂರು–ಹಜೂರ್ ಸಾಹಿಬ್ ನಾಂದೇಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಂಭವಿಸಿದ ಬೆಂಕಿ ಅವಘಡದ ಬಳಿಕ ರೈಲ್ವೆ ಸುರಕ್ಷತಾ ಆಯುಕ್ತರು ನೀಡಿದ ಶಿಫಾರಸಿನ ಆಧಾರದಲ್ಲಿ ಈ ನಿಯಮ ಜಾರಿಗೆ ತರಲಾಗಿತ್ತು.
2021ರ ಮಾರ್ಚ್‌ನಲ್ಲಿಯೂ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಲ್ವೆ ಅಧಿಕಾರಿಗಳು ಸೂಚಿಸಿದ್ದರು. ಇದರ ಭಾಗವಾಗಿ ಪಶ್ಚಿಮ ರೈಲ್ವೆ 2021ರ ಮಾರ್ಚ್ 16ರಿಂದ ನಿಗದಿತ ಸಮಯದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳಿಗೆ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸುವ ಕ್ರಮ ಆರಂಭಿಸಿತ್ತು.
ಪವರ್ ಬ್ಯಾಂಕ್ ಸ್ಫೋಟದ ಘಟನೆಯ ಹಿನ್ನೆಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ನಿಯಮವನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ರೈಲ್ವೆ ಮಂಡಳಿ ಮುಂದಾಗಿದೆ.
ಪ್ರಯಾಣಿಕರಿಗೆ ಸೂಚನೆ
ರಾತ್ರಿ ಪ್ರಯಾಣಿಸುವವರು ರೈಲು ಹತ್ತುವ ಮೊದಲು ತಮ್ಮ ಮೊಬೈಲ್ ಫೋನ್‌ಗಳು ಮತ್ತು ಅಗತ್ಯ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಿಕೊಳ್ಳುವಂತೆ ರೈಲ್ವೆ ಸೂಚಿಸಿದೆ. ರಾತ್ರಿ 11ರಿಂದ ಬೆಳಗಿನ 5ರವರೆಗೆ ರೈಲುಗಳಲ್ಲಿನ ಚಾರ್ಜಿಂಗ್ ಪಾಯಿಂಟ್‌ಗಳು ಕಾರ್ಯನಿರ್ವಹಿಸುವುದಿಲ್ಲ.
ಸಮರಸ ಸುದ್ದಿ | www.samarasasudhi.com



