HEALTH TIPS

ಕಾರಿನಲ್ಲಿ 150 ಗ್ರಾಂ ಮೆಥಾಂಫೆಟಮಿನ್ ಸಾಗಾಟ ಪ್ರಕರಣ: ಐವರಿಗೆ ತಲಾ 15 ವರ್ಷ ಕಠಿಣ ಜೈಲು ಶಿಕ್ಷೆ, ₹2 ಲಕ್ಷ ದಂಡ

ಕಾಸರಗೋಡು: ಕಾರಿನಲ್ಲಿ 150 ಗ್ರಾಂ ಮೆಥಾಂಫೆಟಮಿನ್ ಸಾಗಾಟ ನಡೆಸಿದ ಪ್ರಕರಣದಲ್ಲಿ ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ ಐವರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶೆ ಟಿ.ಎನ್. ರಜಿತ ಅವರು ಐವರಿಗೆ ತಲಾ 15 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದ ನಾಲ್ಕನೇ ಆರೋಪಿ ಸೂರಜ್‌ನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.


ಚಟ್ಟಂಚಾಲ್‌ನ ಅಬೂಬಕ್ಕರ್ (38), ಅವರ ಪತ್ನಿ ಅಮೀನ ಅಶ್ರ (35), ಬೆಂಗಳೂರಿನ ವಸೀಂ ಅಕ್ರಂ (35) ಹಾಗೂ ನೈಜೀರಿಯಾ ಪ್ರಜೆಗಳಾದ ಹಫ್ಸ ರಿಹಾನಸ್ ಉಸ್ಮಾನ್ ಅಲಿಯಾಸ್ ಬ್ಲಿಸ್ಸಿಂಗ್ ಜೋಯ್ (25) ಮತ್ತು ಉಕ್ಕೆ ಮೋಸಸ್ (31) ಶಿಕ್ಷೆಗೊಳಗಾದವರು.

ಪ್ರತಿಯೊಬ್ಬರಿಗೂ ತಲಾ ₹2 ಲಕ್ಷ ದಂಡ ವಿಧಿಸಲಾಗಿದ್ದು, ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ.

ತೀರ್ಪು ಪ್ರಕಟಿಸುವ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಮೊದಲ ಮತ್ತು ಎರಡನೇ ಆರೋಪಿಗಳಾದ ಅಬೂಬಕ್ಕರ್ ಹಾಗೂ ಅವರ ಪತ್ನಿ ಅಮೀನ ಅಶ್ರ ವಿರುದ್ಧ ವಾರಂಟ್ ಹೊರಡಿಸಲಾಗಿದೆ.

2023ರಲ್ಲಿ ಕಾರಿನಲ್ಲಿ ಮಾದಕವಸ್ತು ಪತ್ತೆ

2023ರ ಏಪ್ರಿಲ್ 21ರಂದು ಉದುಮ ಪಳ್ಳದಲ್ಲಿ ಸ್ವಿಫ್ಟ್ ಕಾರಿನಲ್ಲಿ ಸಂಚರಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅವರಿಂದ 150 ಗ್ರಾಂ ಮೆಥಾಂಫೆಟಮಿನ್ ವಶಪಡಿಸಿಕೊಳ್ಳಲಾಗಿತ್ತು. ಅಂದಿನ ಬೇಕಲ ಪೊಲೀಸ್ ಠಾಣೆಯ ಎಸ್‌ಐ ಪ್ರದೀಪ್ ಪಿ.ಕೆ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು.

ಮೊದಲ ಆರೋಪಿ ಅಬೂಬಕ್ಕರ್‌ನ ಒಳಉಡುಪಿನೊಳಗೆ ಹಾಗೂ ಕಾರಿನಲ್ಲಿ ಮಾದಕವಸ್ತು ಪತ್ತೆಯಾಗಿತ್ತು. ಬಳಿಕ ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಲಭಿಸಿದ ಮಾಹಿತಿಯ ಆಧಾರದಲ್ಲಿ ನಡೆಸಿದ ತನಿಖೆಯಲ್ಲಿ ನೈಜೀರಿಯಾ ಪ್ರಜೆಗಳ ಪಾತ್ರ ಬೆಳಕಿಗೆ ಬಂದಿತ್ತು. ನಂತರ ವಿಶೇಷ ಪೊಲೀಸ್ ತಂಡವೊಂದು ಬೆಂಗಳೂರಿನಿಂದ ಅವರನ್ನು ಬಂಧಿಸಿತ್ತು.

ನಕಲಿ ಸಿಮ್ ಕಾರ್ಡ್‌ ಬಳಸಿ ದಂಧೆ ನಡೆಸಿದ ಆರೋಪ

ಆರೋಪಿಗಳು 2023ರಿಂದ ನ್ಯಾಯಾಂಗ ಬಂಧನದಲ್ಲಿದ್ದರು. ನೈಜೀರಿಯಾ ಪ್ರಜೆಗಳು ಬೆಂಗಳೂರು, ದೆಹಲಿ ಸೇರಿದಂತೆ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಶಿಕ್ಷಣಕ್ಕಾಗಿ ಭಾರತಕ್ಕೆ ಬಂದಿದ್ದ ಅವರ ವೀಸಾ ಅವಧಿ ಮುಗಿದ ಬಳಿಕವೂ ಅಗತ್ಯ ದಾಖಲೆಗಳಿಲ್ಲದೆ ದೇಶದಲ್ಲಿ ಉಳಿದುಕೊಂಡಿದ್ದರು ಎಂದು ವರದಿಯಾಗಿದೆ.

ಭಾರತೀಯ ಪ್ರಜೆಗಳ ಗುರುತಿನ ದಾಖಲೆಗಳನ್ನು ಬಳಸಿ ನಕಲಿಯಾಗಿ ಸಿದ್ಧಪಡಿಸಿದ ಸಿಮ್ ಕಾರ್ಡ್‌ಗಳ ಮೂಲಕ ಮಾದಕವಸ್ತು ದಂಧೆ ನಡೆಸುತ್ತಿದ್ದರು ಎಂಬ ಆರೋಪವೂ ಪ್ರಕರಣದಲ್ಲಿತ್ತು. ನ್ಯಾಯಾಲಯದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐವರಿಗೆ ಶಿಕ್ಷೆ ವಿಧಿಸಲಾಗಿದೆ.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries