ಕಾಸರಗೋಡು: 'ವಂದೇ ಮಾತರಂ' ಕೇವಲ ಒಂದು ಗೀತೆಯಲ್ಲ, ಬದಲಾಗಿ ದೇಶದ ಜನರನ್ನು ಹಾಗೂ ವೈವಿಧ್ಯತೆಯನ್ನು ಒಗ್ಗೂಡಿಸುವ ರಾಷ್ಟ್ರದ ಹೃದಯಗೀತೆಯಾಗಿದೆ ಎಂದು ಲೇಖಕ ಮಲನ್ ವಿ. ನಾರಾಯಣನ್ ತಿಳಿಸಿದ್ದಾರೆ.
ಅವರು 'ವಂದೇ ಮಾತರಂ'ನ 150ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ, ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್‍ಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
'ವಂದೇ ಮಾತರಂ' ರಚನೆಯಾದಾಗ ಸಂವಿಧಾನವಾಗಲಿ ಅಥವಾ ರಾಷ್ಟ್ರಧ್ವಜವಾಗಲಿ ಅಸ್ತಿತ್ವದಲ್ಲಿರಲಿಲ್ಲ. ಅದು ರಾಷ್ಟ್ರದ ಕುರಿತಾದ ಒಂದು ದೃಷ್ಟಿಕೋನದಲ್ಲಿ ಬೇರೂರಿತ್ತು. ಅದರ ಪ್ರತಿಧ್ವನಿ ದೇಶಾದ್ಯಂತ ಪಸರಿಸಿ ಜನರ ಧ್ವನಿಯಾಗಿ ಮಾರ್ಪಟ್ಟಿತು. ತರಗತಿ ಕೊಠಡಿಗಳು, ಮೆರವಣಿಗೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅದರ ಮೇಲೆ ನಿಷೇಧ ಹೇರಿದ್ದಾಗಲೂ, 'ವಂದೇ ಮಾತರಂ' ಪ್ರತಿಯೊಬ್ಬರ ಹೃದಯದಲ್ಲಿ ಜೀವಂತವಾಗಿದ್ದುಕೊಂಡು ಸ್ವಾತಂತ್ರ್ಯ ಹೋರಾಟಗಾರರಲ್ಲಿ ಧೈರ್ಯವನ್ನು ತುಂಬಿ ಅವರು ನೇಣುಗಂಬದತ್ತ ಸಾಗುತ್ತಿದ್ದಾಗಲೂ ಅವರ ಬಾಯಲ್ಲಿ 'ವಂದೇ ಮಾತರಂ' ಘೋಷಣೆ ಮೊಳಗುತ್ತಿತ್ತು ಎಂದು ತಿಳಿಸಿದರು.
'ಪ್ರಜ್ಞಾ ಪ್ರವಾಹ'ದ ರಾಷ್ಟ್ರೀಯ ಸಂಚಾಲಕ ಜೆ. ನಂದಕುಮಾರ್ ಮುಖ್ಯಭಾಷಣ ಮಾಡಿ, 'ವಂದೇ ಮಾತರಂ' ಆಚರಣೆ ರಾಷ್ಟ್ರದ ಪುನರುಜ್ಜೀವನವನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ದೀರ್ಘಕಾಲದವರೆಗೆ 'ವಂದೇ ಮಾತರಂ' ಮರೆವಿನ ಕತ್ತಲೆಯಲ್ಲಿ ಕಳೆದುಹೋಗಿತ್ತು; ಆದರೆ ಈಗ ಪರಿಸ್ಥಿತಿ ಬದಲಾಗಿದೆ ಮತ್ತು ಈ ಪುನರುಜ್ಜೀವನವನ್ನು ಸಂಭ್ರಮದಿಂದ ಆಚರಿಸಬೇಕು ಹಾಗೂ ಗೌರವಿಸಬೇಕಾದ ಕಳಘಟ್ಟ ಇದಾಗಿದೆ ಎಂದು ತಿಳಿಸಿದರು.
ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಸಿದ್ದು ಪಿ. ಅಲ್ಗೂರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಖ್ಯಾತ ವಿದ್ವಾಂಸೆ ಸುನೈನಾ ಸಿಂಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡೀನ್ (ಶೈಕ್ಷಣಿಕ) ಪೆÇ್ರ. ಜೋಸೆಫ್ ಕೊಯಿಪ್ಪಲ್ಲಿ ಉಪಸ್ಥಿತರಿದ್ದರು. ಸಾಹಿತ್ಯ ಅಕಾಡೆಮಿಯ ಉಪ ಕಾರ್ಯದರ್ಶಿ ನವೀನ್ ಕುಮಾರ್ ಸ್ವಾಗತಿಸಿದರು. ಭಾಷೆ ಹಾಗೂ ತುಲನಾತ್ಮಕ ಸಾಹಿತ್ಯ ವಿಭಾಗದ ಡೀನ್ ಡಾ. ತಾರು ಎಸ್. ಪವಾರ್ ವಂದಿಸಿದರು.
ಇಂದು ಸಮಾರೋಪ:
ಎರಡು ದಿವಸಗಳ ವಿಚಾರಸಂಕಿರಣ ಅ. 7ರಂದು ಸಂಪನ್ನಗೊಳ್ಳಲಿದೆ. ಬೆಳಗ್ಗೆ11ಕ್ಕೆ ನಡೆಯುವ ಸಮಾರಂಭದಲ್ಲಿ ಕೇರಳ ರಾಜ್ಯಪಾಲರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಾಹಿತ್ಯ ಅಕಾಡೆಮಿಯ ಮಲಯಾಳಂ ಸಲಹಾ ಮಂಡಳಿಯ ಸಂಚಾಲಕರಾದ ಕೆ. ಪಿ. ರಾಮನುನ್ನಿ ಸಮಾರೋಪ ಭಾಷಣ ಮಾಡಲಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪವನ್‍ಪುತ್ರ ಬದಲ್ ಅಧ್ಯಕ್ಷತೆ ವಹಿಸುವರು. ಸಾಹಿತ್ಯ ಅಕಾಡೆಮಿಯ ಸಂಪಾದಕಿ (ಇಂಗ್ಲಿಷ್) ಸ್ನೇಹಾ ಚೌಧರಿ ಮುಖ್ಯ ಭಾಷಣ ಮಾಡುವರು. ಸಂಜೆ 4ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವುದು.



