HEALTH TIPS

ಕೋಲ್ಕತ್ತ ಕಾಲ್ತುಳಿತ: 19 ಜನರ ಸಾವಿಗೆ ಮಳೆಯಷ್ಟೇ ಕಾರಣವಲ್ಲ! ಇಲ್ಲಿದೆ ವಿವರ

ಕೋಲ್ಕತ್ತ: ನಗರದ ಚೋರ್ಬಗನ್‌ ಸರ್ಬೊಜನಿನ್‌ನಲ್ಲಿ ಆಯೋಜಿಸಿದ್ದ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ ಸಂಭವಿಸಿದ ಕಾಲ್ತುಳಿತದಿಂದಾಗಿ ಇದುವರೆಗೆ 19 ಜನರು ಮೃತಪಟ್ಟು, 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.


ವಾರ್ಷಿಕ ದುರ್ಗಾ ಪೂಜಾ ಉತ್ಸವದಲ್ಲಿ ಭಾಗವಹಿಸಲು ಭಕ್ತರು ಅಪಾರ ಸಂಖ್ಯೆಯಲ್ಲಿ ಸೇರಿದ್ದರು. ಸಂಜೆ ಮಳೆ ಆರಂಭವಾಗುತ್ತಿದ್ದಂತೆ, ಮಂಟಪದ ಹೊರಗಿದ್ದವರೆಲ್ಲ ಒಮ್ಮೆಲೆ ಒಳಗೆ ನುಗ್ಗಿದ್ದರು. ಹೀಗಾಗಿ, ನೂಕುನುಗ್ಗಲು ಉಂಟಾಗಿತ್ತು. ವಿಪರೀತ ಜನದಟ್ಟಣೆಯಿಂದ ಮಂಟಪದ ದ್ವಾರ ಕುಸಿದು, ಕಾಲ್ತುಳಿತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ, ಮಳೆಯಷ್ಟೇ ಅಲ್ಲ; ಜನದಟ್ಟಣೆ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯ, ಘಟನೆ ಸಂದರ್ಭದಲ್ಲಿ ಧ್ವನಿವರ್ದಕಗಳಲ್ಲಿ ಮಾಡಿದ ತಪ್ಪಾದ ಘೋಷಣೆಗಳು, ಅದರಿಂದ ಉಂಟಾದ ಗೊಂದಲಗಳೂ ದುರಂತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಹಾಗೆಯೇ, ಸ್ಥಳದಲ್ಲಿ ನಿಯೋಜಿಸಲಾಗಿದ್ದ ಭದ್ರತಾ ಸಿಬ್ಬಂದಿಯ ಸಂಖ್ಯೆಯೂ ಕಡಿಮೆ ಇತ್ತು. ಇದರಿಂದ, ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು ಎಂದಿದ್ದಾರೆ ಅವರು.

ʼಸಂಘಟಕರು ಭಾರೀ ಎಡವಟ್ಟುಗಳನ್ನು ಮಾಡಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಸಾಕ್ಷ್ಯಗಳಿವೆ. ಅಪಾರ ಸಂಖ್ಯೆಯಲ್ಲಿ ಬರುವ ಭಕ್ತರನ್ನು ನಿಭಾಯಿಸಲು ಸರಿಯಾದ ಯೋಜನೆ ರೂಪಿಸಿರಲಿಲ್ಲ. ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ಸ್ಥಳೀಯರು ಮತ್ತು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಭದ್ರತಾ ಸಿಬ್ಬಂದಿಯ ಸಂಖ್ಯೆಯೂ ತೀರಾ ಕಡಿಮೆ ಇತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆʼ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ʼಕಾಲ್ತುಳಿತದ ವೇಳೆ ಜನರು ಪ್ರವೇಶ ದ್ವಾರದ ಮೂಲಕವೇ ಹೊರಗೆ ಓಡಲು ಪ್ರಯತ್ನಿಸಿದ್ದರು. ದ್ವಾರ ಮತ್ತು ಅಲ್ಲಿಗೆ ಹೋಗುವ ಮಾರ್ಗ ಎರಡೂ ಕಿರಿದಾಗಿದ್ದದ್ದು ನೂಕುನುಗ್ಗಲನ್ನು ಹೆಚ್ಚಿಸಿತು. ಹಾಗೆಯೇ, ಹೊರಗೆ ಹೋಗುವ, ಒಳಗೆ ಬರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಡಲಾದ ಘೋಷಣೆಗಳು ಜನರಲ್ಲಿ ಗೊಂದಲ ಮೂಡಿಸಿದವು. ಇದು, ಹೆಚ್ಚಿನ ಹಾನಿಗೆ ಕಾರಣವಾಯಿತುʼ ಎಂದಿದ್ದಾರೆ.

ಒಳಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ʼಪೆಂಡಾಲ್‌ ವೇದಿಕೆ ಕುಸಿದು ಬೀಳಲಿದೆ. ಎಲ್ಲರೂ ಕೂಡಲೇ ಹೊರಗೆ ಹೋಗಿʼ ಎಂದು ಘೋಷಣೆ ಮಾಡಿರುವ ಸಂದರ್ಭದ ವಿಡಿಯೊ ನಮ್ಮಲ್ಲಿದೆ. ಆ ಘೋಷಣೆ ಮಾಡಿದವರು ಯಾರು? ಅದಕ್ಕೇನು ಕಾರಣ ಎಂಬುದನ್ನು ಪತ್ತೆ ಮಾಡುತ್ತೇವೆʼ ಎಂದು ತಿಳಿಸಿದ್ದಾರೆ.

ʼಸ್ಥಳದಲ್ಲಿ ಭದ್ರತಾ ಸಿಬ್ಬಂದಿಯ ಸಂಖ್ಯೆ ತೀರಾ ಕಡಿಮೆ ಇತ್ತು. ಹಾಗಿದ್ದರೂ, ಹೆಚ್ಚಿನವರನ್ನು ವಿಐಪಿ ಪ್ರವೇಶ ದ್ವಾರದಲ್ಲೇ ನಿಯೋಜಿಸಲಾಗಿತ್ತುʼ ಎಂದು ಆರೋಪಿಸಿರುವ ಅಧಿಕಾರಿ, ʼವಿಧಿವಿಜ್ಞಾನ ತಜ್ಞರ ತಂಡವು ಶನಿವಾರ ರಾತ್ರಿಯೇ ಪೆಂಡಾಲ್‌ಗೆ ಭೇಟಿ ನೀಡಿ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಮತ್ತೊಂದು ತಂಡ ಇಂದು ಪೆಂಡಾಲ್‌ಗೆ ಭೇಟಿ ನೀಡಿ ಇನ್ನಷ್ಟು ಪುರಾವೆ ಸಂಗ್ರಹಿಸಲಿದೆʼ ಎಂದು ವಿವರಿಸಿದ್ದಾರೆ.

ತನಿಖೆ ಪ್ರಗತಿಯಲ್ಲಿದೆ. ಏತನ್ಮಧ್ಯೆ, ಚೋರ್ಬಗನ್‌ ದುರ್ಗಾಗೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೌಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಈ ಸ್ಥಳದ ಆಸುಪಾಸಿನ ರಸ್ತೆಗಳಲ್ಲಿಯೂ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧವು ಅಕ್ಟೋಬರ್ 20ರವರೆಗೆ ಜಾರಿಯಲ್ಲಿರುತ್ತದೆ.

ಪ್ರಕರಣದ ತನಿಖೆಗೆ ಕಲ್ಕತ್ತ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವುದಾಗಿ ಘೊಷಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ಮೃತರ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಹಾಗೂ ಒಬ್ಬರಿಗೆ ಡಿ ಗ್ರೂಪ್‌ ನೌಕರಿ ನೀಡುವುದಾಗಿ ಭರವಸೆ ನೀಡಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries