ನವದೆಹಲಿ: ಮುಟ್ಟಿನ ಅವಧಿಯಲ್ಲಿನ ನೈರ್ಮಲ್ಯವು ಕೂಡ ಮೂಲಭೂತ ಹಕ್ಕಿನ ಭಾಗ ಎಂದು ಘೋಷಿಸಿ ತಾನು ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಸ್ಪಂದಿಸದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡೆಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
'ತೀರ್ಪಿನಲ್ಲಿ ತಾನು ಉಲ್ಲೇಖಿಸಿದ ವಿಚಾರವು ಕೇವಲ ಕಾಗದದಲ್ಲಿಯೇ ಉಳಿದರೆ ಕೇಂದ್ರ ಸರ್ಕಾರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಈ ಮೂಲಭೂತ ಹಕ್ಕನ್ನು ಜಾರಿಗೊಳಿಸುವುದಾದರೂ ಹೇಗೆ' ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಆರ್.ಮಹಾದೇವನ್ ಅವರು ಇದ್ದ ಪೀಠ ಈ ಕುರಿತ ಅರ್ಜಿ ವಿಚಾರಣೆ ವೇಳೆ ಈ ಮಾತು ಹೇಳಿದೆ.
'ಮುಟ್ಟಿನ ಅವಧಿಯಲ್ಲಿನ ನೈರ್ಮಲ್ಯ/ಆರೋಗ್ಯ ಕೂಡ ಸಂವಿಧಾನದ 21ನೇ ವಿಧಿ ಅಡಿ ಮೂಲಭೂತ ಹಕ್ಕು ಎನಿಸಲಿದೆ' ಎಂದು ಜನವರಿ 30ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಘೋಷಿಸಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ತಾನು ಉಲ್ಲೇಖಿಸಿರುವ ಕೊರತೆಗಳ ಕುರಿತು ಕ್ರಮ ಕೈಗೊಳ್ಳಬೇಕು ಹಾಗೂ ಈ ಕುರಿತ ತನ್ನ ತೀರ್ಪಿನ ಅನುಷ್ಠಾನಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸಬೇಕು ಎಂದು ನ್ಯಾಯಪೀಠವು ಸೆಪ್ಟೆಂಬರ್ 1ರಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತ್ತು.
ಇದೇ ವಿಚಾರವಾಗಿ ಅಕ್ಟೋಬರ್ 13ರಂದು ಅರ್ಜಿಗಳ ವಿಚಾರಣೆ ನಡೆಸಿದ್ದ ಪೀಠವು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ತನ್ನ ತೀರ್ಪು ಅನುಷ್ಠಾನಕ್ಕೆ ಕೊನೆಯ ಅವಕಾಶ ನೀಡುವುದಾಗಿ ಎಚ್ಚರಿಸಿದ್ದ ಪೀಠ, ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿತ್ತು.
ಸುಪ್ರೀಂ ಕೋರ್ಟ್ಕೆಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸ್ಪಂದಿಸುತ್ತಿಲ್ಲ ಎಂದು ಮುಂದಿನ ವಿಚಾರಣೆ ವೇಳೆ ಕೇಂದ್ರ ಸರ್ಕಾರ ತಿಳಿಸಿದಲ್ಲಿ ಸಂಬಂಧಪಟ್ಟ ಮುಖ್ಯ ಕಾರ್ಯದರ್ಶಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು'ಸುಪ್ರೀಂ' ನಿರ್ದೇಶನ ಏನು?
* ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಪ್ರತಿಯೊಂದು ಸರ್ಕಾರಿ ಖಾಸಗಿ ಶಾಲೆಗಳಲ್ಲಿ ಶೌಚಾಲಯ ಹಾಗೂ ನೀರಿನ ಸೌಲಭ್ಯ ಇರಬೇಕು
* ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು
* ಬಾಲಕಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವ್ಯವಸ್ಥೆ ಮಾಡಬೇಕು.



