ಕುಂಬಳೆ: ಕುಂಬಳೆ ಬಂಟರ ಸಂಘ ಹಾಗೂ ಕುಂಬಳೆ ಪಂಚಾಯತ್ ಸಮಿತಿಯ ವತಿಯಿಂದ ನವೆಂಬರ್ 1ರಂದು ಬೆಳಿಗ್ಗೆ 10ರಿಂದ ಕುಂಬಳೆ ಸಮೀಪದ ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ವಠಾರದಲ್ಲಿ ‘ಬಂಟರ ಪರ್ಬ’ ಕಾರ್ಯಕ್ರಮ ನಡೆಯಲಿದೆ.
ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಂಬಿಲಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಬಂಬ್ರಾಣ ಯಜಮಾನ್ ಮೋಹನದಾಸ ರೈ ಅಧ್ಯಕ್ಷತೆ ವಹಿಸಲಿದ್ದಾರೆ.
ಕುಂಬಳೆ ಫರ್ಕಾ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹೈಕೋರ್ಟ್ ವಕೀಲೆ ಭಾಗ್ಯಶ್ರೀ ರೈ, ಮಾತೃಸಂಘ ಕಾಸರಗೋಡು ತಾಲೂಕು ಸಮಿತಿ ಸಂಚಾಲಕ ಮುಕ್ತಾನಂದ ರೈ, ಕಾಸರಗೋಡು ಬಂಟರ ಸಂಘದ ಜತೆ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಕುಟ್ಟಿಕ್ಕಾರ್, ಮಾತೃಸಂಘ ಮಂಗಳೂರು ಕಾರ್ಯಕಾರಿ ಸಮಿತಿ ಸದಸ್ಯೆ ಪುಷ್ಪಲತಾ ಪಿ. ಶೆಟ್ಟಿ ಹಾಗೂ ಕುಂಬಳೆ ಮಹಿಳಾ ಘಟಕದ ಕಾರ್ಯದರ್ಶಿ ಪ್ರೇಮಾ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಿವಿಧ ಕ್ರೀಡಾ ಸ್ಪರ್ಧೆಗಳು
ಕಾರ್ಯಕ್ರಮದ ಅಂಗವಾಗಿ ಕುಂಬಳೆ ಪಂಚಾಯತ್ ವ್ಯಾಪ್ತಿಯ ಪುರುಷರಿಗೆ ಕ್ರಿಕೆಟ್ ಪಂದ್ಯಾಟ ಸೇರಿದಂತೆ ಪುರುಷರು ಹಾಗೂ ಮಹಿಳೆಯರಿಗಾಗಿ ಹಗ್ಗಜಗ್ಗಾಟ ಮತ್ತಿತರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕುಂಬಳೆ ಬಂಟರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ವಹಿಸಲಿದ್ದಾರೆ. ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ವಕೀಲ ಐ. ಸುಬ್ಬಯ್ಯ ರೈ, ಉದ್ಯಮಿಗಳಾದ ಕೆ.ಕೆ. ಶೆಟ್ಟಿ ಕುಟ್ಟಿಕ್ಕಾರ್, ವಿವೇಕ್ ಶೆಟ್ಟಿ ಕಿದೂರುಗುುತ್ತು, ಮೋಹನ್ ರೈ ಕುಂಡಾಪು ಹಾಗೂ ಹಡ್ಕೋ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್. ಆಳ್ವ ಕಿದೂರುಗುುತ್ತು ಮೊದಲಾದವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು.
ಸಂಜೆ 6ರಿಂದ ನಮ್ಮ ಕಲಾವಿದೆರ್ ಬೆದ್ರ ತಂಡದ ಉಮೇಶ್ ಮಿಜಾರ್ ಬಳಗದವರಿಂದ ತುಳು ಹಾಸ್ಯ ಕಾರ್ಯಕ್ರಮ ‘ತೆಲಿಕೆದ ಗೊಂಚಿಲ್’ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.



