ಕಾಸರಗೋಡು: 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಕೇರಳ ರಾಜ್ಯಮಟ್ಟದ ಸಮಾರೋಪ ಸಮಾರಂಭ ನವೆಂಬರ್ 20ರಂದು ಕಾಸರಗೋಡು ಜಿಲ್ಲೆಯ ಕಾಕ್ಕಂಗಾಡಿನ ಪಲೇರಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಸಮಾರಂಭದ ಪ್ರಚಾರಾರ್ಥ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಅಕ್ಟೋಬರ್ 29ರಿಂದ ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಕಾಸರಗೋಡು ಸರ್ಕಲ್ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಆರ್. ಜಯಾನಂದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ಟೋಬರ್ 29ರಂದು ಮಧ್ಯಾಹ್ನ 3 ಗಂಟೆಗೆ ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಸಮೀಪ ರಾಷ್ಟ್ರಧ್ವಜವನ್ನು ಕೇಂದ್ರವಾಗಿರಿಸಿಕೊಂಡು ಪ್ರಮುಖ ಚಿತ್ರಕಲಾವಿದರ ಸಹಭಾಗಿತ್ವದಲ್ಲಿ ‘ಮಾತು ಮತ್ತು ಚಿತ್ರ’ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ನಿತಿನ್‌ರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
73 ಸಹಕಾರಿ ಸಂಘಗಳಿಂದ ಸಸಿ ನೆಡುವ ಕಾರ್ಯಕ್ರಮ
ನವೆಂಬರ್ 1ರಂದು ಕೇರಳ ರಾಜ್ಯೋತ್ಸವದ ಅಂಗವಾಗಿ ಜಿಲ್ಲೆಯಾದ್ಯಂತ ಆಯ್ಕೆಯಾದ 73 ಸಹಕಾರಿ ಸಂಘಗಳ ಆವರಣದಲ್ಲಿ ‘ನೆನಪಿನ ಮರಗಳು’ ಕಾರ್ಯಕ್ರಮದಡಿ 73 ಸಸಿಗಳನ್ನು ನೆಡಲಾಗುವುದು. ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ಕಾಕ್ಕಂಗಾಡು ಸಹಕಾರಿ ಬ್ಯಾಂಕ್ ಆವರಣದಲ್ಲಿ ನಡೆಯಲಿದ್ದು, ಮಾರ್ಕೆಟ್‌ಫೆಡ್ ಅಧ್ಯಕ್ಷ ಸೊನಿ ಸೆಬಾಸ್ಟಿಯನ್ ಸಸಿ ನೆಡುವ ಮೂಲಕ ಉದ್ಘಾಟಿಸಲಿದ್ದಾರೆ.
ನವೆಂಬರ್ 7ರಂದು ಸಹಕಾರಿ ಧ್ವಜದೊಂದಿಗೆ ಬೈಕ್ ರ‍್ಯಾಲಿ
ನವೆಂಬರ್ 7ರಂದು ಕುಂಬಳೆಯಿಂದ ಸಹಕಾರಿ ಧ್ವಜಗಳನ್ನು ಅಳವಡಿಸಿದ 73 ಬೈಕ್‌ಗಳನ್ನು ಒಳಗೊಂಡ ರ‍್ಯಾಲಿ ತೃಕ್ಕರಿಪುರದವರೆಗೆ ಸಾಗಲಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ.
ನವೆಂಬರ್ 13ರಂದು ಫ್ಲ್ಯಾಶ್‌ಮಾಬ್
ನವೆಂಬರ್ 13ರಂದು ನೀಲೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಕಾಸರಗೋಡಿನ ಹೊಸ ಬಸ್ ನಿಲ್ದಾಣದಲ್ಲಿ ಫ್ಲ್ಯಾಶ್‌ಮಾಬ್ ನಡೆಯಲಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾಕ್ಕಂಗಾಡು, ನೀಲೇಶ್ವರ, ಪಯ್ಯನ್ನೂರು, ಚೆರುವತ್ತೂರು ಮತ್ತು ತೃಕ್ಕರಿಪುರಗಳಲ್ಲಿ ಫ್ಲ್ಯಾಶ್‌ಮಾಬ್ ಆಯೋಜಿಸಲಾಗುವುದು.
ನವೆಂಬರ್ 19ರಂದು ಸಂಭ್ರಮದ ಮೆರವಣಿಗೆ
ನವೆಂಬರ್ 19ರಂದು ಮಧ್ಯಾಹ್ನ ಕಾಕ್ಕಂಗಾಡು ನಗರದಲ್ಲಿ ಸಂಭ್ರಮದ ಮೆರವಣಿಗೆ ನಡೆಯಲಿದೆ. ಶಾಸಕ ಗೋವಿಂದನ್ ಪಳ್ಳಿಕ್ಕಾಪಿಲ್ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನವೆಂಬರ್ 20ರಂದು ರಾಜ್ಯಮಟ್ಟದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಜಯಾನಂದ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಇಲಾಖೆಯ ಜಂಟಿ ನಿಬಂಧಕ ಕೆ.ವಿ. ಸತೀಶ್‌ಚಂದ್ರನ್, ಸಹಾಯಕ ನಿಬಂಧಕ ಸಿ. ಸುನಿಲ್ ಕುಮಾರ್, ನೀಲೇಶ್ವರ ಎಡಿಸಿ ಕಾಲೇಜಿನ ಪ್ರಾಂಶುಪಾಲ ಪಿ.ವಿ. ರಾಜೇಶ್, ಸಹಾಯಕ ನಿಬಂಧಕ ಪಿ. ವಿನೋದ್ ಕುಮಾರ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಕೆ. ವಿನೋದ್ ಕುಮಾರ್ ಉಪಸ್ಥಿತರಿದ್ದರು.

