ಕೈರೊ: ಇರಾನ್ ಬೆಂಬಲಿತ ಹೂಥಿ ಬಂಡುಕೋರರು ದಕ್ಷಿಣ ಯೆಮೆನ್ನಲ್ಲಿನ ಸೇನಾ ಶಿಬಿರದ ಮೇಲೆ ಸೋಮವಾರ ದಾಳಿ ಮಾಡಿದ್ದು, 20 ಯೋಧರು ಮೃತಪಟ್ಟಿದ್ದಾರೆ.
'ಅಲ್-ಅಲಮ್ ಸೇನಾ ಶಿಬಿರದ ಮೇಲೆ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದಾರೆ. 24ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ' ಎಂದು ಯೆಮೆನ್ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
'ಮೃತಪಟ್ಟ ಸೈನಿಕರೆಲ್ಲರೂ ಹೊಸದಾಗಿ ನೇಮಕಗೊಂಡಿದ್ದವರು. ಈ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುತ್ತೇವೆ' ಎಂದು ಅಧ್ಯಕ್ಷೀಯ ಮಂಡಳಿಯ ಮುಖ್ಯಸ್ಥ ರಶದ್ ಅಲ್-ಅಲಿಮಿ ಅವರು ಹೇಳಿದ್ದಾರೆ.
ಸೌದಿ ಬೆಂಬಲಿತ ಸೇನೆ ಮತ್ತು ಹೂಥಿ ಬಂಡುಕೋರರ ನಡುವೆ ಇತ್ತೀಚೆಗೆ ಸಂಘರ್ಷ ಆರಂಭಗೊಂಡ ಬಳಿಕ ನಡೆದ ಭೀಕರ ದಾಳಿ ಇದಾಗಿದೆ.
ಉತ್ತರ ಸಾದಾ ಪ್ರಾಂತ್ಯದಲ್ಲಿನ ಯೆಮೆನ್ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದ ಮೇಲೆ ಸೌದಿ ನೇತೃತ್ವದ ಪಡೆಗಳು ಭಾನುವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಐದು ಮಕ್ಕಳು ಮತ್ತು ಮಹಿಳೆ ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ ಎಂದು ಹೂಥಿಯ ಆರೋಗ್ಯ ಸಚಿವಾಲಯ ತಿಳಿಸಿದೆ.



