ಜೆರುಸೆಲೇಂ/ಅಬುಸೇನ್: 'ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರ ಅವಧಿ ಮುಗಿದ ಬಳಿಕ, ಅಲ್ಲಿ ಅಧಿಕಾರಕ್ಕೆ ಬರುವವರು ಇಸ್ರೇಲ್ ಅನ್ನು ಶತ್ರು ಎಂದು ಪರಿಗಣಿಸುತ್ತಾರೆ. ಆದ್ದರಿಂದ, ನಾವು ಈಗ ಭಾರತ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ದೇಶಗಳೊಂದಿಗೆ ನಮ್ಮ ಸ್ನೇಹವನ್ನು ಗಟ್ಟಿಗೊಳಿಸಿಕೊಳ್ಳಬೇಕು' ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಭಿಪ್ರಾಯಪಟ್ಟರು.
ಅ.27ರಂದು ಇಸ್ರೇಲ್‌ನಲ್ಲಿ ಚುನಾವಣೆ ನಡೆಯಲಿದೆ. ನೆತನ್ಯಾಹು ಅವರು ತಮ್ಮ ಪ್ರಚಾರವನ್ನು ಚುರುಕುಗೊಳಿಸಿದ್ದಾರೆ. 'ಚುನಾವಣೆಯಲ್ಲಿ ನೆತನ್ಯಾಹು ಅವರಿಗೆ ಬೆಂಬಲ ನೀಡುತ್ತೇನೆ' ಎಂದು ಟ್ರಂಪ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ, ದೇಶದ ಸೇನಾ ಶಕ್ತಿಯ ಕುರಿತು ಭಾನುವಾರ ಮಾತನಾಡುವ ವೇಳೆ ಹಲವು ವಿಚಾರಗಳನ್ನು ನೆತನ್ಯಾಹು ಅವರು ಹಂಚಿಕೊಂಡಿದ್ದಾರೆ.
'ಇನ್ನು ಎರಡು ವರ್ಷಗಳಲ್ಲಿ ಪುರುಷ ಅಥವಾ ಮಹಿಳೆ- ಯಾರಾದರೂ ಅಮೆರಿಕದ ಅಧ್ಯಕ್ಷರಾಗುತ್ತಾರೆ. ಇವರು ಇಸ್ರೇಲ್ ಅನ್ನು ಶತ್ರು ಎಂಬಂತೆ ನೋಡುತ್ತಾರೆ. ಇಂಥ ಹೊತ್ತಿನಲ್ಲಿ ಏನು ಮಾಡಬೇಕು? ಅಮೆರಿಕದೊಂದಿಗೆ ನಮ್ಮ ಸಂಬಂಧ ಹೇಗಿರಬೇಕು? ಇದಕ್ಕೆಲ್ಲಾ ಪರಿಹಾರವೇನು?' ಎಂದು ಜನರನ್ನು ಪ್ರಶ್ನಿಸಿದ್ದಾರೆ.
'ಮೊದಲಿಗೆ, ನಾವು ಟ್ರಂಪ್ ಅವರು ಅಧಿಕಾರದಲ್ಲಿ ಇರುವ ಈ ಎರಡು ವರ್ಷಗಳಲ್ಲಿ ನಮಗೆ ಬೇಕಾದ್ದು ಎಲ್ಲವನ್ನೂ ಮಾಡಿಕೊಳ್ಳಬೇಕು. ಎರಡನೇಯದ್ದು, ಭಾರತ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕು. ಭಾರತವೇನು ಚಿಕ್ಕ ದೇಶವಲ್ಲ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಂಧನ: ವೆಸ್ಟ್ ಬ್ಯಾಂಕ್‌ನಲ್ಲಿ ನೆಲೆಸಿರುವ ಪ್ಯಾಲೆಸ್ಟೀನಿಯನ್ನರ ಮೇಲೆ ಯಹೂದಿಗಳು ನಡೆಸಿದ ದಾಳಿ ಘಟನೆಗೆ ಸಂಬಂಧಿಸಿ ಇಸ್ರೇಲ್ ಪೊಲೀಸರು 10 ಮಂದಿಯನ್ನು ಸೋಮವಾರ ಬಂಧಿಸಿದ್ದಾರೆ. ಈ ಪೈಕಿ ವಿದೇಶಿ ಪತ್ರಕರ್ತರೊಬ್ಬರು, ಯುರೋಪ್‌ನ ರಾಜತಾಂತ್ರಿಕರು ಸೇರಿದ್ದಾರೆ. ಪೊಲೀಸರು ಬಂಧಿತರ ಗುರುತು ಬಹಿರಂಗಪಡಿಸಿಲ್ಲ.



