ಪ್ಯಾರಿಸ್: ಹೆಚ್ಚುತ್ತಿರುವ ಜೀವನ ವೆಚ್ಚ, ಬೆಲೆ ಏರಿಕೆ, ಅಸಮಾನತೆಯನ್ನು ಪ್ರಶ್ನಿಸಿ ಸಾವಿರಾರು ಜನರು ಬೀದಿಗಿಳಿಯುತ್ತಿರುವುದರಿಂದ ಫ್ರಾನ್ಸ್ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದೆ.
ಲಕ್ಷಾಂತರ ಜನರು ಶನಿವಾರ ಶಾಂತಿಯುತವಾಗಿ ಪ್ರತಿಭಟನೆ ಆರಂಭಿಸಿದ್ದರು.
ಆದರೆ, ಕೆಲವೇ ಗಂಟೆಗಳಲ್ಲಿ ಪರಿಸ್ಥಿತಿ ಬದಲಾಗಿತ್ತು. ಉದ್ರಿಕ್ತರ ಗುಂಪುಗಳು ಸಾರ್ವಜನಿಕ ಕಟ್ಟಡಗಳನ್ನು ಧ್ವಂಸಗೊಳಿಸಿದ್ದು, ಐಷಾರಾಮಿ ಅಂಗಡಿ ಮತ್ತು ಸೂಪರ್ ಮಾರ್ಕೆಟ್‌ಗಳನ್ನು ಲೂಟಿ ಮಾಡಿದ್ದವು. ಪ್ರತಿಭಟನಾಕಾರರು ಮತ್ತು ಪೊಲೀಸರೊಂದಿಗಿನ ಘರ್ಷಣೆ ಅಶಾಂತಿಗೆ ಕಾರಣವಾಗಿದೆ.
ಪ್ರತಿಭಟನೆಗೆ ಏನು ಕಾರಣ?
ಫ್ರಾನ್ಸ್‌ನಲ್ಲಿ ದೈನಂದಿನ ಅಗತ್ಯ ವಸ್ತುಗಳು, ಇಂಧನ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ಸೆಪ್ಟೆಂಬರ್ ಮಧ್ಯಭಾಗದಿಂದಲೇ ಶಾಲಾ-ಕಾಲೇಜುಗಳಲ್ಲಿ ಮೂಲಸೌಕರ್ಯ ಮತ್ತು ಶಿಕ್ಷಕರ ಕೊರತೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಅಕ್ಟೋಬರ್ 17ರಂದು ನಡೆದ ಬೃಹತ್ ರ‍್ಯಾಲಿಯಲ್ಲಿ ಯೂನಿಯನ್‌ಗಳು, ಕಾರ್ಮಿಕರು, ರೈತರು ಮತ್ತು 'ಎಲ್ಲೋ ವೆಸ್ಟ್' ಚಳವಳಿದಾರರು ಭಾಗವಹಿಸಿದ್ದರು.
ಫ್ರಾನ್ಸ್‌ನಲ್ಲಿ ಮುಂದಿನ ವರ್ಷ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಸದ್ಯ ಇಮ್ಯಾನುಯೆಲ್ ಮ್ಯಾಕ್ರನ್ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿದೆ. ಈ ಎಲ್ಲ ಅಂಶಗಳು ಬೃಹತ್ ಪ್ರತಿಭಟನೆಗೆ ಕಾರಣವಾಗಿವೆ.
ಲೂಯಿ ವಿಟಾನ್, ಎರ್ಮೆಸ್, ಆಯಪಲ್ ಮಳಿಗೆಗಳೇ ಗುರಿ?
ಲೂಯಿ ವಿಟಾನ್, ಎರ್ಮೆಸ್ ಮತ್ತು ಆಯಪಲ್‌ನಂತಹ ಬ್ರ್ಯಾಂಡ್‌ಗಳು ಲಕ್ಷಾಂತರ ರೂಪಾಯಿ ಮೌಲ್ಯದ ಐಷಾರಾಮಿ ಉತ್ಪನ್ನಗಳನ್ನು ಮಾರಾಟ ಮಾಡುತ್ತವೆ. ಸಾಮಾನ್ಯ ಜನರು ದೈನಂದಿನ ಜೀವನೋಪಾಯಕ್ಕೆ ಪರದಾಡುತ್ತಿರುವಾಗ, ಈ ಮಳಿಗೆಗಳು ಶ್ರೀಮಂತಿಕೆ ಮತ್ತು ವ್ಯವಸ್ಥೆಯ ಅಸಮಾನತೆಯ ಸ್ಪಷ್ಟ ಸಂಕೇತಗಳಾಗಿ ಪ್ರತಿಭಟನಾಕಾರರ ಕಣ್ಣಿಗೆ ಕಾಣಿಸುತ್ತಿವೆ.
ಪ್ರತಿಭಟನೆಯ ತೀವ್ರತೆಯಿಂದಾಗಿ ಪೋಲಿಸರು ಪರಿಸ್ಥಿತಿ ನಿಯಂತ್ರಿಸಲು ಹೆಣಗಾಡುತ್ತಿರುವಾಗ, ಮಾಸ್ಕ್ ಧರಿಸಿದ ಕೆಲ ದುಷ್ಕರ್ಮಿಗಳು ಮತ್ತು ಲೂಟಿಕೋರರು ದುಬಾರಿ ವಸ್ತುಗಳನ್ನು ಕದಿಯಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದೂ ವರದಿಯಾಗಿದೆ.
ಲೂಟಿಯಿಂದಾಗಿ ಸೂಪರ್‌ಮಾರ್ಕೆಟ್‌ಗಳು, ಔಷಧಾಲಯಗಳು, ಬಟ್ಟೆ ಅಂಗಡಿಗಳು ಮತ್ತು ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿಗಳ ಮೇಲೂ ಪರಿಣಾಮ ಬೀರಿದೆ.
ಹಿಂಸಾಚಾರ ನಡೆದ ಪ್ರಮುಖ ನಗರಗಳು...
ಪ್ಯಾರಿಸ್ ಆಚೆಗೂ ಅಶಾಂತಿ ಹರಡಿದ್ದು, ಹಲವ ಪ್ರಮುಖ ನಗರಗಳಲ್ಲಿ ಹಾನಿಗೊಳಗಾದ ಅಂಗಡಿಗಳು, ಬೆಂಕಿ ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆಗಳು ವರದಿಯಾಗಿವೆ.
ಪ್ಯಾರಿಸ್: ಮುಖವಾಡ ಧರಿಸಿದ್ದ ಗುಂಪುಗಳು ಪ್ರಮುಖ ಶಾಪಿಂಗ್ ಕೇಂದ್ರಗಳನ್ನು ಗುರಿಯಾಗಿಸಿದ್ದಾರೆ. ಮಳಿಗೆಗಳ ಕಿಟಕಿಗಳನ್ನು ಒಡೆದು, ಬೆಂಕಿ ಹಚ್ಚಿದ್ದು, ಪೊಲೀಸರೊಂದಿಗೂ ಘರ್ಷಣೆ ನಡೆಸಿವೆ.
ಬೋರ್ಡೆಕ್ಸ್: ನಗರದ ಪ್ರಸಿದ್ಧ ರೂ ಸೇಂಟ್-ಕ್ಯಾಥರೀನ್ ಶಾಪಿಂಗ್ ರಸ್ತೆಯಲ್ಲಿರುವ ಲೂಯಿ ವಿಟಾನ್ ಮತ್ತು ಆಯಪಲ್ ಮಳಿಗೆಗಳನ್ನು ಲೂಟಿ ಮಾಡಲಾಗಿದೆ.
ಮಾರ್ಸಿಲ್ಲೆ: ಹರ್ಮೆಸ್ ಮಳಿಗೆ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ ಸಾರ್ವಜನಿಕ ಕಟ್ಟಡಗಳನ್ನು ಧ್ವಂಸಗೊಳಸಲಾಗಿದೆ.
ಲಿಲ್ಲೆ: ಆಯಪಲ್ ಮಳಿಗೆಯನ್ನು ಲೂಟಿ ಮಾಡಲಾಗಿದೆ ಎಂದು ವರದಿಯಾಗಿದೆ.
ಲಿಯಾನ್: ಪ್ರವಾಸಿ ಕಚೇರಿಗೆ ಬೆಂಕಿ ಸೇರಿದಂತೆ ಸಾರ್ವಜನಿಕ ಆಸ್ತಿಗೆ ಅಪಾರ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಲಿಮೋಗೆಸ್: ನಗರದಲ್ಲಿ 143 ವರ್ಷ ಹಳೆಯದಾದ ನಗರ ಸಭಾಂಗಣವು ಹೊತ್ತಿ ಉರಿದಿದೆ.
ಸರ್ಕಾರದ ಪ್ರತಿಕ್ರಿಯೆ
ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಪ್ರಧಾನಿ ಸೆಬಾಸ್ಟಿಯನ್ ಲೆಕೋರ್ನು ಅವರು ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಿದವರು ಮತ್ತು ಲೂಟಿ ಮಾಡಿದವರನ್ನು ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ದೇಶಾದ್ಯಂತ ಸುಮಾರು 5,50,000 ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆಗಳ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 2,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. 150ಕ್ಕೂ ಹೆಚ್ಚು ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರಕ್ಕೆ ಎಡಪಂಥೀಯ ಗುಂಪುಗಳು, ವ್ಯವಸ್ಥಿತವಾಗಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಗುಂಪುಗಳೇ ಕಾರಣ ಎಂದು ಸರ್ಕಾರ ಆರೋಪಿಸಿದೆ.
'ಎಲ್ಲೋ ವೆಸ್ಟ್' ಚಳವಳಿಯೊಂದಿಗಿನ ಹೋಲಿಕೆ...
2018ರಲ್ಲಿ ಇಂಧನ ಬೆಲೆ ಏರಿಕೆ ವಿರುದ್ಧ ಆರಂಭವಾದ 'ಎಲ್ಲೋ ವೆಸ್ಟ್' ಚಳವಳಿಯಂತೆಯೇ ಪ್ರಸ್ತುತ ಪ್ರತಿಭಟನೆಯೂ ಬೆಲೆ ಏರಿಕೆ ಮತ್ತು ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧದ ಆಕ್ರೋಶವಾಗಿದೆ. ಆದರೆ, ಶಾಂತಿಯುತವಾಗಿ ಹಕ್ಕುಗಳಿಗಾಗಿ ಪ್ರತಿಭಟಿಸುವ ಸಾರ್ವಜನಿಕರಿಗೂ ಮತ್ತು ಲೂಟಿ, ಹಿಂಸಾಚಾರದಲ್ಲಿ ತೊಡಗಿರುವ ದುಷ್ಕರ್ಮಿಗಳಿಗೂ ದೊಡ್ಡ ವ್ಯತ್ಯಾಸವಿದೆ ಎಂದು ಸರ್ಕಾರ ಹೇಳಿದೆ.



