ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವಕ್ಕೆ ತೆರೆ
ಮಧೂರು: ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಕಳೆದ ಒಂದು ವರ್ಷದಿಂದ ರಾಜ್ಯದಾದ್ಯಂತ ನಡೆಯುತ್ತಿದ್ದ ‘ರಜತರಂಗ’ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಅಕ್ಟೋಬರ್ 31 ಮತ್ತು ನವೆಂಬರ್ 1ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಕೂಡ್ಲು ಸುಬ್ರಾಯ ಶ್ಯಾನುಭೋಗ್ ವೇದಿಕೆಯಲ್ಲಿ ಎರಡು ದಿನಗಳ ಕಾರ್ಯಕ್ರಮಗಳು ನಡೆಯಲಿವೆ. ಯಕ್ಷಗಾನ, ತಾಳಮದ್ದಳೆ, ಸನ್ಮಾನ, ಸಂಸ್ಮರಣೆ, ಗುರು ವಂದನೆ ಹಾಗೂ ಧಾರ್ಮಿಕ ಸಭೆಗಳು ಸಮಾರಂಭದ ಪ್ರಮುಖ ಆಕರ್ಷಣೆಗಳಾಗಿವೆ.
ಅಕ್ಟೋಬರ್ 31: ಪೂರ್ವರಂಗ, ಸಭೆ ಮತ್ತು ಯಕ್ಷಗಾನ
ಅಕ್ಟೋಬರ್ 31ರಂದು ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದ ಅರ್ಚಕರಿಂದ ದೀಪಪ್ರಜ್ವಲನೆ ನಡೆಯಲಿದೆ. ಬಳಿಕ ಕೇಂದ್ರದ ಸದಸ್ಯರಿಂದ ಪೂರ್ವರಂಗ ಹಾಗೂ ಸಭಾ ಕಾರ್ಯಕ್ರಮ ಜರುಗಲಿದೆ. ರಜತರಂಗದ ಅಧ್ಯಕ್ಷ ಡಾ. ಹರಿಕಿರಣ ಬಂಗೇರ ಅಧ್ಯಕ್ಷತೆ ವಹಿಸಲಿದ್ದಾರೆ.
ಕ್ಷೇತ್ರದ ಆನುವಂಶಿಕ ಮೊಕ್ತೇಸರ ಕೆ.ಜಿ. ಶ್ಯಾನುಭೋಗ್ ಹಾಗೂ ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಗೌರವ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸುಜ್ಞಾನಿ ಶ್ಯಾನುಭೋಗ್, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವಾಸುದೇವ ಹೊಳ್ಳ ಮಧೂರು ಹಾಗೂ ಪುಷ್ಪ ಭಾಗವಹಿಸಲಿದ್ದಾರೆ.
ಕೆ. ಸತ್ಯನಾರಾಯಣ ತಂತ್ರಿ, ತಲ್ಪನಾಜೆ ವೆಂಕಟರಮಣ ಭಟ್, ರವೀಂದ್ರ ಭಂಡಾರಿ ನಾರಂಪಾಡಿ, ಡಾ. ಖಾಸಿಂ ಟಿ. ಹಾಗೂ ಡಾ. ನಾರಾಯಣ ನಾಯ್ಕ್ ಉಪಸ್ಥಿತರಿರುವರು.
ಕೀರ್ತಿಶೇಷ ಪುತ್ತಿಗೆ ರಾಮಕೃಷ್ಣ ಜೋಯಿಸರು ಹಾಗೂ ಕೀರ್ತಿಶೇಷ ಕಾವು ಕಣ್ಣ ಅವರ ಸಂಸ್ಮರಣೆ ನಡೆಯಲಿದೆ. ನಾ. ಕಾರಂತ ಪೆರಾಜೆ ಹಾಗೂ ಕೆ. ಜಗದೀಶ್ ಕೂಡ್ಲು ಸಂಸ್ಮರಣ ನುಡಿಗಳನ್ನಾಡಲಿದ್ದಾರೆ.
ಕೇಂದ್ರದಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿದ ಸದಸ್ಯರಿಗೆ ಸನ್ಮಾನ ಹಾಗೂ ಕೂಡ್ಲು-ಕುತ್ಯಾಳ ಕ್ಷೇತ್ರದಲ್ಲಿ ನಾಟ್ಯಕಲೆ ಕಲಿತ ಹಿರಿಯರಿಗೆ ಗೌರವಾರ್ಪಣೆ ನಡೆಯಲಿದೆ. ಕಿಶೋರ್ ಕೂಡ್ಲು ಸ್ವಾಗತಿಸಲಿದ್ದು, ಹರಿನಾರಾಯಣ ಮಯ್ಯ ಬಜೆಯವರು ಕಾರ್ಯಕ್ರಮ ನಿರೂಪಿಸಲಿದ್ದಾರೆ. ಆಕಾಶ್ ಕೂಡ್ಲು ವಂದನಾರ್ಪಣೆ ಸಲ್ಲಿಸಲಿದ್ದಾರೆ.
ಬಳಿಕ ಕೇಂದ್ರದ ಸದಸ್ಯರಿಂದ ‘ಮಾಗಧ ವಧೆ’ ತಾಳಮದ್ದಳೆ, ಯಕ್ಷಗಾನ ವೈಭವ ಹಾಗೂ ಸಂಪೂರ್ಣ ‘ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.
ನವೆಂಬರ್ 1: ತಾಳಮದ್ದಳೆ, ನೂತನ ತಂಡದ ರಂಗಪ್ರವೇಶ
ನವೆಂಬರ್ 1ರಂದು ಬೆಳಿಗ್ಗೆ 9.30ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ‘ಇಂದ್ರತಂತ್ರ–ಪ್ರಹ್ಲಾದ ಶಾಪ’ ತಾಳಮದ್ದಳೆ ನಡೆಯಲಿದೆ.
ಹಿಮ್ಮೇಳದಲ್ಲಿ ಚಿನ್ಮಯ ಭಟ್ ಕಲ್ಲಡ್ಕ, ವಿಕ್ರಂ ಮಯ್ಯ ಪೈವಳಿಕೆ ಹಾಗೂ ಮಧುರಾಜ್ ಅಡಿಗ ಭಾಗವಹಿಸಲಿದ್ದಾರೆ. ಅರ್ಥಧಾರಿಗಳಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಾಸುದೇವ ರಂಗ ಭಟ್ ಹಾಗೂ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ.
ಬಳಿಕ ಕೇಂದ್ರದ ನೂತನ ತಂಡದ ರಂಗಪ್ರವೇಶದ ಅಂಗವಾಗಿ ‘ಬಭ್ರುವಾಹನ ಕಾಳಗ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಮಧ್ಯಾಹ್ನ 2.30ರಿಂದ ಸಮಾರೋಪ ಸಭೆ
ಮಧ್ಯಾಹ್ನ 2.30ರಿಂದ ನಡೆಯುವ ಸಮಾರೋಪ ಸಭೆಯಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ರಜತ ಮಹೋತ್ಸವದ ಅಂಗವಾಗಿ ಎರಡು ದಿನಗಳ ಕಾಲ ನಡೆಯುವ ಯಕ್ಷಗಾನ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಕಲಾಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿವೆ.

