HEALTH TIPS

ಗುಜರಾತ್:₹325 ಕೋಟಿ ವೆಚ್ಚದ ಜಾನುವಾರು ತಳಿ ಅಭಿವೃದ್ಧಿ ಕೇಂದ್ರ ಉದ್ಘಾಟಿಸಿದ ಮೋದಿ

ಪಾಲನ್‌ಪುರ: ಗುಜರಾತ್‌ನ ಬನಸ್ಕಾಂತ ಜಿಲ್ಲೆಯ ಭಿಲ್ಡಿಯಲ್ಲಿ ದೇಶಿಯ ತಳಿಯ ಹಸುಗಳ ತಳಿ ಸುಧಾರಣೆ ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ₹325 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 'ಭಾರತ್ ಜಾನುವಾರು ತಳಿ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ'ವನ್ನು (ಬಿಬಿಬಿಆರ್‌ಸಿ) ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಅ.30) ಉದ್ಘಾಟಿಸಿದ್ದಾರೆ. 


ಗುಜರಾತ್‌ಗೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ಮೋದಿ, ಭಿಲ್ಡಿಗೆ ಆಗಮಿಸಿ ಬಿಬಿಬಿಆರ್‌ಸಿ ಕೇಂದ್ರದ ವೀಕ್ಷಣೆ ನಡೆಸಿದರು. ಈ ವೇಳೆ ಅಲ್ಲಿನ ಸೌಲಭ್ಯ ಮತ್ತು ಕಾರ್ಯವೈಖರಿಯನ್ನು ತಿಳಿಯಲು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ.

127 ಎಕರೆ ಪ್ರದೇಶದಲ್ಲಿ ₹325 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಬಿಬಿಬಿಆರ್‌ಸಿ ಕೇಂದ್ರವನ್ನು ಬನಾಸ್ ಡೈರಿಯು, ರಾಷ್ಟ್ರೀಯ ಹಾಲಿನ ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ತಾಂತ್ರಿಕ ಮಾರ್ಗದರ್ಶನ ಹಾಗೂ ಕೇಂದ್ರ ಸರ್ಕಾರದ 'ರಾಷ್ಟ್ರೀಯ ಗೋಕುಲ್ ಮಿಷನ್'ನ ಬೆಂಬಲದೊಂದಿಗೆ ಸ್ಥಾಪಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಈ ಕೇಂದ್ರವು ಇನ್-ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ಮತ್ತು ಭ್ರೂಣ ವರ್ಗಾವಣೆಯಂತಹ ಸುಧಾರಿತ ತಳಿ ತಂತ್ರಜ್ಞಾನಗಳನ್ನು ಬಳಸಿ ದೇಶಿಯ ತಳಿಯ ಜಾನುವಾರುಗಳ ಗುಣಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಲಿದೆ. ಇದು ವಾರ್ಷಿಕವಾಗಿ 25,000 ಉತ್ತಮ ಗುಣಮಟ್ಟದ ಭ್ರೂಣಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಈ ಕೇಂದ್ರವು ಕಾಂಕ್ರೇಜ್, ಗಿರ್, ಸಾಹಿವಾಲ್ ಮತ್ತು ತಾರ್‌ಪಾರ್ಕರ್‌ನಂತಹ ದೇಶಿಯ ಹಸುವಿನ ತಳಿಗಳು ಹಾಗೂ ಮೆಹ್ಸಾನಿ, ಬನ್ನಿ, ಜಾಫರಾಬಾದಿ ಮತ್ತು ಮುರ್ರಾ ಸೇರಿದಂತೆ ಎಮ್ಮೆಯ ತಳಿಗಳನ್ನು ಅಭಿವೃದ್ಧಿಪಡಿಸಲಿದೆ ಎಂದು ಮಾಹಿತಿ ನೀಡಿದೆ.

ಸಾಕುಪ್ರಾಣಿಗಳ ನಿರ್ವಹಣೆ ವೆಚ್ಚ ಹೆಚ್ಚಾಗುತ್ತಿರುವ ಮತ್ತು ಮೇವಿನ ಲಭ್ಯತೆ ಕಡಿಮೆಯಾಗುತ್ತಿರುವ ಈ ಸಮಯದಲ್ಲಿ, ಕಡಿಮೆ ಸಂಖ್ಯೆಯ ಪ್ರಾಣಿಗಳಿಂದ ಹೆಚ್ಚಿನ ಹಾಲಿನ ಇಳುವರಿ ಪಡೆಯಲು ಕ್ಷೀರ ಕೃಷಿಕರಿಗೆ ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ. ಈ ವೇಳೆ ಪ್ರಧಾನಿ ಮೋದಿ ಅವರು ಬನಾಸ್ ಡೈರಿಯ ಐದು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಹೇಳಿದೆ.

ಇದೇ ವೇಳೆ ₹14 ಸಾವಿರ ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪಿಎಂ-ಕಿಸಾನ್ ಯೋಜನೆಯ 24ನೇ ಕಂತನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮತ್ತು ಗುಜರಾತ್ ವಿಧಾನಸಭೆಯ ಸ್ಪೀಕರ್ ಹಾಗೂ ಬನಾಸ್ ಡೈರಿಯ ಅಧ್ಯಕ್ಷ ಶಂಕರ್ ಚೌಧರಿ ಅವರು ಮೋದಿ ಅವರೊಂದಿಗಿದ್ದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries