ಇಂಫಾಲ: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಗುಂಪುಗಳಿಂದ ಭೀಕರವಾಗಿ ಹತ್ಯೆಗೀಡಾಗಿರುವ ವ್ಯಕ್ತಿಯ ಕತ್ತರಿಸಿದ ಶಿರವನ್ನು (ತಲೆ) ಹಿಂದಿರುಗಿಸಲು ನಾಗಾ ಸಿವಿಲ್ ಸೊಸೈಟಿ ಸಂಘಟನೆಯು 48 ಗಂಟೆಗಳ ಗಡುವು ನೀಡಿದೆ.
ಕಾಂಗ್‌ಪೋಕ್ಪಿ ಜಿಲ್ಲೆಯ ಮಕುಯಿ ಅಶಾಂಗ್ ಗ್ರಾಮದಲ್ಲಿ ಶನಿವಾರ, ನಡೆದ ಶಂಕಿತ ಉಗ್ರರ ದಾಳಿಯಲ್ಲಿ 52 ವರ್ಷದ ಅಜಿನ್‌ಬೌ ಆರ್ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.
ಶಿರವಿಲ್ಲದ ಶವವನ್ನು ಭಾನುವಾರ ರಾತ್ರಿ ಮರಣೋತ್ತರ ಪರೀಕ್ಷೆಗಾಗಿ ಇಂಫಾಲ್‌ನ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ತರಲಾಗಿತ್ತು.
ಸೇನಾ ಸಮವಸ್ತ್ರ ಧರಿಸಿದ್ದ ಶಸ್ತ್ರಸಜ್ಜಿತ ಉಗ್ರರು ಅಜಿನ್‌ಬೋವ್ ಅವರ ಕತ್ತರಿಸಿದ ಶಿರವನ್ನು ತಮ್ಮ ನಡುವೆ ಇಟ್ಟುಕೊಂಡಿರುವ ವಿಡಿಯೊ ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಅಜಿನ್‌ಬೋವ್ ಅವರ ಶಿರ ಇನ್ನೂ ಪತ್ತೆಯಾಗಿಲ್ಲ. ಅವರ ಕುಟುಂಬಸ್ಥರು ಗೌರವಯುತವಾಗಿ ಅಂತ್ಯಕ್ರಿಯೆ ನೆರವೇರಿಸಲು ಅದನ್ನು (ಶಿರ) ಹಿಂತಿರುಗಿಸುವವರೆಗೆ ನಾವು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ. ಕಡಿದ ತಲೆಯನ್ನು ಉಗ್ರರು ವಿಜಯದ ಸಂಕೇತದಂತೆ ಪ್ರದರ್ಶಿಸಿದ್ದಾರೆ. ತಲೆ ಸಿಗುವ ತನಕ ಮೃತದೇಹವನ್ನು ಮುಟ್ಟಲು ಬಿಡುವುದಿಲ್ಲ ಎಂದು ಮಣಿಪುರದ ಜಂಟಿ ಬುಡಕಟ್ಟು ಮಂಡಳಿ ಭಾನುವಾರ ಎಚ್ಚರಿಸಿದೆ.
ಮತ್ತೆ ಆರಂಭವಾದ ಈ ಹಿಂಸಾಚಾರಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೇ ನೇರ ಹೊಣೆ ಎಂದಿರುವ ಮಂಡಳಿ, 'ಈ ಭೀಕರ ಅಪರಾಧವು ಮಾನವಕುಲಕ್ಕೇ ಎಸಗಿದ ಘೋರ ಅಪಮಾನ' ಎಂದು ಕಿಡಿಕಾರಿದೆ.
ಕತ್ತರಿಸಿದ ತಲೆಯನ್ನು ಪತ್ತೆಹಚ್ಚಿ 48 ಗಂಟೆಗಳ ಒಳಗಾಗಿ ತಂದೊಪ್ಪಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ತೀವ್ರಗೊಂಡ ಸಂಘರ್ಷ:
ಕಳೆದ ವಾರದಿಂದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶುಕ್ರವಾರ ಮತ್ತು ಶನಿವಾರ ಕಾಮ್‌ಜೋಂಗ್, ಉಖ್ರುಲ್ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಗುಂಡಿನ ದಾಳಿಯಲ್ಲಿ ಕನಿಷ್ಠ 9 ಜನ ಮೃತಪಟ್ಟಿದ್ದಾರೆ.
ಕುಕಿ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿರುವ ಚಸ್ಸಾದ್ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಐದು ಮಕ್ಕಳ ತಾಯಿಯಾದ 22 ವರ್ಷದ ಯುವತಿಯನ್ನು ಗುಂಡಿಕ್ಕಿ ಕೊಂದಿದ್ದರು. ಈ ಘಟನೆ ಬೆನ್ನಲ್ಲೇ ಕುಕಿ ಮತ್ತು ನಾಗಾ ಸಶಸ್ತ್ರ ಗುಂಪುಗಳ ನಡುವೆ ಗುಂಡಿನ ಚಕಮಕಿ ಆರಂಭವಾಗಿದ್ದು, ಶನಿವಾರ ಬೆಳಿಗ್ಗೆಯವರೆಗೂ ಮುಂದುವರಿದಿದೆ.
ಮುಖ್ಯಮಂತ್ರಿ ವೈ.ಖೇಮ್‌ಚಂದ್ ಸಿಂಗ್ ಅವರು ಈ ಹತ್ಯೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಿ, ಶಾಂತಿ -ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಮತ್ತು ಎಲ್ಲಾ ನಾಗರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಮತ್ತು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ವರ್ಷದ ಫೆಬ್ರುವರಿಯಿಂದ ಕುಕಿ ಮತ್ತು ನಾಗಾ ಬುಡಕಟ್ಟು ಜನಾಂಗಗಳ ನಡುವಿನ ಹಿಂಸಾಚಾರದಲ್ಲಿ 50 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ ಮತ್ತು ಹಲವ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಈ ಹಿಂದೆ ಇಲ್ಲಿನ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆದ ಜನಾಂಗೀಯ ಹಿಂಸಾಚಾರದಲ್ಲಿ 300 ಕ್ಕೂ ಹೆಚ್ಚು ಜನ ಮೃತಪಟ್ಟು, 49 ಮಂದಿ ನಾಪತ್ತೆಯಾಗಿದ್ದರು. ಅಲ್ಲದೇ ಸಾವಿರಾರು ಜನ ನಿರಾಶ್ರಿತರಾಗಿದ್ದರು.



