ನವದೆಹಲಿ: ಹೂಥಿ ಬಂಡುಕೋರರ ದಾಳಿ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ದಮ್ಮಾಮ್ ಮತ್ತು ರಿಯಾದ್‌ಗೆ ಏರ್ ಇಂಡಿಯಾ ಹಾಗೂ ಎಐ ಎಕ್ಸ್‌ಪ್ರೆಸ್ ಸಂಸ್ಥೆಗಳ ವಿಮಾನಗಳ ಹಾರಾಟವನ್ನು ನವೆಂಬರ್ 7ರವರೆಗೆ ರದ್ದುಗೊಳಿಸಲಾಗಿದೆ.
ಅಕ್ಟೋಬರ್ 31ರವರೆಗೆ ಜೆಡ್ಡಾಗೆ ಏರ್ ಇಂಡಿಯಾ ವಿಮಾನಗಳ ಹಾರಾಟ ರದ್ದುಗೊಂಡಿದೆ.
ಸೌದಿಅರೇಬಿಯಾದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇಂಡಿಗೊ ಮತ್ತು ಆಕಾಶಾ ಏರ್ ಸಹ ವಿಮಾನಗಳ ಹಾರಾಟವನ್ನು ರದ್ದು ಮಾಡಿವೆ. ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳು ಸೇರಿದಂತೆ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಹೂಥಿ ಬಂಡುಕೋರರು ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಾರೆ.
'ಸೌದಿ ಅರೇಬಿಯಾದ ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ರಿಯಾದ್ ಮತ್ತು ದಮ್ಮಾಮ್‌ಗೆ ತೆರಳಬೇಕಿದ್ದ ಹಾಗೂ ಅಲ್ಲಿಂದ ಹೊರಡಬೇಕಿದ್ದ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ನವೆಂಬರ್ 7 ರವರೆಗೆ ಸ್ಥಗಿತಗೊಳಿಸಲಾಗಿದೆ. ಜೆಡ್ಡಾಗೆ ತೆರಳಬೇಕಿದ್ದ ಮತ್ತು ಅಲ್ಲಿಂದ ಹೊರಡಬೇಕಿದ್ದ ವಿಮಾನಗಳು ಅಕ್ಟೋಬರ್ 31ರವರೆಗೆ ಸ್ಥಗಿತಗೊಳ್ಳುತ್ತವೆ'ಎಂದು ಏರ್ ಇಂಡಿಯಾ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಅಕ್ಟೋಬರ್ 24ರಂದು ಅಥವಾ ಅದಕ್ಕಿಂತ ಮೊದಲು ಟಿಕೆಟ್ ಬುಕಿಂಗ್ ಮಾಡಿರುವ ಪ್ರಯಾಣಿಕರು, ಮರುಬುಕಿಂಗ್ ಆಯ್ಕೆ ಪಡೆಯಬಹುದು. ಇಲ್ಲವಾದರೆ, ಬುಕಿಂಗ್ ರದ್ದುಗೊಳಿಸಿ ಪೂರ್ಣ ಮರುಪಾವತಿ ಪಡೆಯಬಹುದು ಎಂದು ಏರ್ ಇಂಡಿಯಾ ತಿಳಿಸಿದೆ.
ಇದಕ್ಕೂ ಮೊದಲು, ಈ ಎರಡೂ ವಿಮಾನಯಾನ ಸಂಸ್ಥೆಗಳು ಅಕ್ಟೋಬರ್ 24ರವರೆಗೆ ಸೌದಿ ಅರೇಬಿಯಾಕ್ಕೆ ತಮ್ಮ ಸೇವೆಗಳನ್ನು ಸ್ಥಗಿತ ಗೊಳಿಸಿದ್ದವು.



