ಕಾಸರಗೋಡು: ರೈಲಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧಿತ 8,830 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಕಾಸರಗೋಡು ರೈಲ್ವೆ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಮೂಲದ 24 ವರ್ಷದ ಬಿನಿಯಾಮಿನ್ ಎಂಬಾತನನ್ನು ಬಂಧಿಸಲಾಗಿದೆ.
ಅಸ್ಸಾಂನ ನಾಗಾಂವ್ ಜಿಲ್ಲೆಯ ಸಾಮಗೂರಿ, ಗರೂತ್ತಿ ಬಜಾರ್ ನಿವಾಸಿಯಾದ ಬಿನಿಯಾಮಿನ್, ನಿಷೇಧಿತ ತಂಬಾಕು ಉತ್ಪನ್ನಗಳೊಂದಿಗೆ ಮದ್ರಾಸ್ ಮೇಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದನು. ರೈಲು ಕಾಸರಗೋಡು ನಿಲ್ದಾಣ ತಲುಪಿದಾಗ ರೈಲ್ವೆ ಪೊಲೀಸರು ತಪಾಸಣೆ ನಡೆಸಿ, ತಂಬಾಕು ಉತ್ಪನ್ನಗಳ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ವಶಪಡಿಸಿಕೊಂಡ ತಂಬಾಕು ಉತ್ಪನ್ನಗಳ ಅಂದಾಜು ಮೌಲ್ಯ ₹37,610 ಎಂದು ಪೊಲೀಸರು ತಿಳಿಸಿದ್ದಾರೆ.
ಕಾಸರಗೋಡು ರೈಲ್ವೆ ಪೊಲೀಸ್ ಠಾಣೆಯ ಎಸ್‌ಐ ಸನಿಲ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ತಂಡದಲ್ಲಿ ಎಎಸ್‌ಐ ಗಂಗಾಧರನ್, ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ಎ. ಮನುಪ್ ಹಾಗೂ ಸಿಪಿಒ ಸೌಮ್ಯ ಭಾಗವಹಿಸಿದ್ದರು.


