ಕಾಸರಗೋಡು: ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್ ಕಳವು ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿ ವೈ. ಬೈಜು (41) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚಂದೇರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬೈಜು, ನೀರ್ಚಾಲ್ ನಿವಾಸಿ ಎಂದು ತಿಳಿದುಬಂದಿದೆ.
ಎಸ್‌ಐ ವಿಷ್ಣು ಎಸ್. ನಾಯರ್ ಸಲ್ಲಿಸಿದ ವರದಿಯ ಆಧಾರದಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ರಾಜ್ ಅವರ ನಿರ್ದೇಶನದಂತೆ ಚಂದೇರ ಪೊಲೀಸ್ ಠಾಣೆಯ ಸಿಬ್ಬಂದಿ ಬೈಜು ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ 8ರಂದು ಈ ಘಟನೆ ನಡೆದಿತ್ತು. ಪೊಲೀಸ್ ಠಾಣೆಯ ಸಮೀಪ ವಾಸಿಸುವ ಹೊರರಾಜ್ಯದ ಕೂಲಿ ಕಾರ್ಮಿಕರೊಬ್ಬರಿಗೆ ರಸ್ತೆಯಲ್ಲಿ ಸುಮಾರು ₹10,000 ಮೌಲ್ಯದ ರೆಡ್ಮಿ ಮೊಬೈಲ್ ಫೋನ್ ಸಿಕ್ಕಿತ್ತು. ಅವರು ಅದನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದರು. ಮೊಬೈಲ್‌ನ ಮಾಲೀಕರನ್ನು ಪತ್ತೆಹಚ್ಚುವ ಉದ್ದೇಶದಿಂದ ಈ ಮಾಹಿತಿಯನ್ನು ಠಾಣೆಯ ರಿಜಿಸ್ಟರ್‌ನಲ್ಲಿ ದಾಖಲಿಸಲಾಗಿತ್ತು. ಮೊಬೈಲ್ ರಾಮಂತಳಿ ನಿವಾಸಿಯೊಬ್ಬರಿಗೆ ಸೇರಿದ್ದು ಎಂಬುದು ತಿಳಿದುಬಂದಿತ್ತು.
ಮೊಬೈಲ್‌ನ್ನು ತೆಗೆದುಕೊಂಡು ಹೋಗುವುದಾಗಿ ಮಾಲೀಕರು ತಿಳಿಸಿದ್ದರೂ, ಒಂದು ವಾರ ಕಳೆದರೂ ಅವರು ಠಾಣೆಗೆ ಬಂದಿರಲಿಲ್ಲ. ಈ ಮಧ್ಯೆ ಮೊಬೈಲ್ ನಾಪತ್ತೆಯಾಗಿತ್ತು.
ಈ ಕುರಿತು ನಡೆಸಿದ ತನಿಖೆಯಲ್ಲಿ, ಅಂದು ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಬೈಜು ಮೊಬೈಲ್‌ನ್ನು ಕಳವು ಮಾಡಿರುವುದು ದೃಢಪಟ್ಟಿದೆ ಎಂದು ವರದಿಯಾಗಿದೆ. ಬೈಜು ಮೊಬೈಲ್‌ನಲ್ಲಿದ್ದ ಸಿಮ್ ಕಾರ್ಡ್ ತೆಗೆದುಹಾಕುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಎಸ್‌ಐ ಸಲ್ಲಿಸಿದ ವರದಿಯ ಆಧಾರದಲ್ಲಿ ಬೈಜು ವಿರುದ್ಧ ಕಳವು ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.



