ಫೋರ್ಟ್ ಕೊಚ್ಚಿ ಕುರಿತು ದ್ವೇಷಪೂರಿತ ಹೇಳಿಕೆ ನೀಡಿದ ಆರೋಪ; ಅಮೃತ್ ಸಿಂಗ್ ವಿರುದ್ಧ ಕಾನೂನು ಕ್ರಮ ಜರುಗಲಿದೆ ಎಂದು ಸಿಎಂ ವಿ.ಡಿ. ಸತೀಶನ್ ಸ್ಪಷ್ಟನೆ
ತಿರುವನಂತಪುರಂ: ಕೇರಳವು ಒಗ್ಗಟ್ಟಿನಿಂದ ಬದುಕುತ್ತಿರುವ ರಾಜ್ಯವಾಗಿದ್ದು, ಇಲ್ಲಿ ಕೋಮು ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ. ಫೋರ್ಟ್ ಕೊಚ್ಚಿ ಕುರಿತು ದ್ವೇಷಪೂರಿತ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬರ್ ಅಮೃತ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ತನ್ನದೇ ಆದ ರೀತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಫೋರ್ಟ್ ಕೊಚ್ಚಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ಮುಖ್ಯಮಂತ್ರಿಯ ಈ ಹೇಳಿಕೆ ಹೊರಬಿದ್ದಿದೆ.
ಮುಖ್ಯಮಂತ್ರಿ ಹೇಳಿಕೆಯ ಪೂರ್ಣ ವಿವರ
“ಕೇರಳವು ಒಗ್ಗಟ್ಟಿನಿಂದ ಬದುಕುತ್ತಿದೆ. ಇಲ್ಲಿ ಕೋಮು ದ್ವೇಷಕ್ಕೆ ಯಾವುದೇ ಸ್ಥಾನವಿಲ್ಲ.
ರಾಜ್ಯದ ಹೊರಗಿನಿಂದ ಬಂದ ವ್ಲಾಗರ್ ಒಬ್ಬರು ಫೋರ್ಟ್ ಕೊಚ್ಚಿ ಕುರಿತು ತಪ್ಪು ಮಾಹಿತಿಯನ್ನು ಹರಡಲು, ನಮ್ಮ ರಾಜ್ಯವನ್ನು ಕೆಟ್ಟದಾಗಿ ಚಿತ್ರಿಸಲು ಹಾಗೂ ವಿವಿಧ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಲು ಪ್ರಯತ್ನಿಸಿರುವ ಇತ್ತೀಚಿನ ಇನ್ಸ್ಟಾಗ್ರಾಂ ವಿಡಿಯೊವನ್ನು ಒಪ್ಪಲು ಸಾಧ್ಯವಿಲ್ಲ.
ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಕಾನೂನು ತನ್ನದೇ ಆದ ರೀತಿಯಲ್ಲಿ ಮುಂದುವರಿಯಲಿದೆ. ಯಾವುದೇ ಭಯ ಅಥವಾ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳಲು ಯುಡಿಎಫ್ ಸರ್ಕಾರ ಬದ್ಧವಾಗಿದೆ.
ಇದು ದೇವರ ಸ್ವಂತ ನಾಡು. ಇಲ್ಲಿ ದ್ವೇಷಕ್ಕೆ ಸ್ಥಾನವಿಲ್ಲ. ನಮ್ಮ ಸೌಹಾರ್ದತೆಗೆ ಧಕ್ಕೆ ತರಲು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.



