ಬದಿಯಡ್ಕ: ಮೇಲಿನ ನಿರ್ಚಾಲುನಿಂದ ರತ್ನಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸ್ಥಳೀಯರು ತೀವ್ರ ಸಂಚಾರ ಸಮಸ್ಯೆ ಎದುರಿಸುತ್ತಿದ್ದಾರೆ. ಕಳಪೆ ಗುಣಮಟ್ಟದ ಕಾಂಕ್ರೀಟ್ನಿಂದ ನಿರ್ಮಿಸಲಾದ ಈ ರಸ್ತೆಯಲ್ಲಿ ಎರಡು ವಾಹನಗಳು ಎದುರುಬದುರಾಗಿ ಸಂಚರಿಸಲು ಸಾಕಷ್ಟು ಸ್ಥಳಾವಕಾಶವಿಲ್ಲ. ರಸ್ತೆ ಬದಿಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು, ಸ್ವಚ್ಛತೆಯ ಕೊರತೆಯಿಂದ ವಾಹನ ಸವಾರರು ಅಪಘಾತದ ಭೀತಿಯಲ್ಲಿ ಸಂಚರಿಸುವಂತಾಗಿದೆ.
ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುವ ಮಹಿಳೆಯರು ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿದಿನ ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಶಾಲೆ ಬಿಡುವ ಸಮಯದಲ್ಲಿ ಹಾಗೂ ಸಂಜೆ ವೇಳೆ ಕೆಲವು ದ್ವಿಚಕ್ರ ವಾಹನ ಸವಾರರು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ರಸ್ತೆಯಲ್ಲಿ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ಸಂಚಾರ ಮತ್ತಷ್ಟು ಅಪಾಯಕಾರಿಯಾಗಿದೆ. ಕತ್ತಲಿನಿಂದಾಗಿ ಪಾದಚಾರಿಗಳು ಹಾಗೂ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಕ್ರಮ ಚಟುವಟಿಕೆಗಳ ಬಗ್ಗೆ ಆತಂಕ:
ಈ ಪ್ರದೇಶದಲ್ಲಿ ಗಾಂಜಾ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆತಂಕವನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಪೆÇಲೀಸ್ ಇಲಾಖೆ ಹಾಗೂ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಸ್ತೆ ದುರಸ್ತಿ ಹಾಗೂ ಪೆÇಲೀಸ್ ಗಸ್ತಿಗೆ ಆಗ್ರಹ:
ಸಂಬಂಧಪಟ್ಟ ಪಂಚಾಯಿತಿ, ರಸ್ತೆ ನಿರ್ವಹಣಾ ಇಲಾಖೆ ಮತ್ತು ಪೋಲೀಸ್ ಅಧಿಕಾರಿಗಳು ತಕ್ಷಣ ಗಮನಹರಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
- ರಸ್ತೆಯ ಗುಣಮಟ್ಟ ಪರಿಶೀಲಿಸಿ ಹದಗೆಟ್ಟಿರುವ ಭಾಗಗಳಲ್ಲಿ ತಕ್ಷಣ ದುರಸ್ತಿ ಕೈಗೊಳ್ಳಬೇಕು.
- ರಸ್ತೆ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು.
- ಅಗತ್ಯವಿರುವ ಕಡೆ ರಸ್ತೆ ಅಗಲೀಕರಣ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು.
- ರಸ್ತೆಯುದ್ದಕ್ಕೂ ಅಗತ್ಯ ಸ್ಥಳಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಬೇಕು.
- ಶಾಲಾ ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಗಾಗಿ ಶಾಲೆ ಬಿಡುವ ಸಮಯ ಹಾಗೂ ಸಂಜೆ ವೇಳೆ ಪೆÇಲೀಸ್ ಗಸ್ತು ಹೆಚ್ಚಿಸಬೇಕು.
- ಗಾಂಜಾ ಮತ್ತು ಅಕ್ರಮ ಮದ್ಯ ಮಾರಾಟದ ಕುರಿತು ಬಂದಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ರಸ್ತೆ ಸಂಚಾರವನ್ನು ಸುರಕ್ಷಿತಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

.jpeg)
.jpeg)
