ಲೇಹ್ / ಜಮ್ಮು: ಲಡಾಖ್‌ನಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಉತ್ತೇಜನ ನೀಡಲಾಗುತ್ತಿದೆ ಎಂದು ಪರಿಸರ ಹೋರಾಟಗಾರ ಸೋನಮ್ ವಾಂಗ್ಚೂಕ್ ಮಾಡುತ್ತಿರುವ ಆರೋಪ ಸುಳ್ಳು ಎಂದು ಕೇಂದ್ರಾಡಳಿತ ಪ್ರದೇಶದ ಆಡಳಿತವು ಹೇಳಿದೆ. ಹಾಗೆಯೇ, ಅಬಕಾರಿ ನೀತಿ ಕುರಿತು ವದಂತಿ ಹರಡದಂತೆ ಎಚ್ಚರಿಸಿದೆ.
'ಲೆಫ್ಟಿನೆಂಟ್ ಗವರ್ನರ್ ಅವರ ನೀತಿಗಳು ಮಾದಕ ವ್ಯಸನದ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಉಂಟುಮಾಡುತ್ತಿವೆ ಎಂದು ಆರೋಪಿಸಿ ಮಹಿಳೆಯರು ಆರನೇ ದಿನವೂ ಧರಣಿ ಮುಂದುವರಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ-1ರಲ್ಲಿ ಸಂಚಾರ ತಡೆದು ಪ್ರತಿಭಟಿಸಿದ್ದಾರೆ' ಎಂದು ವಾಂಗ್ಚೂಕ್ ಮಂಗಳವಾರ ಹೇಳಿದ್ದರು.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಲಡಾಖ್ ಆಡಳಿತ, 'ಇಡೀ ಲಡಾಖ್‌ನಲ್ಲಿ ಕೇವಲ ಒಂದೇ ಒಂದು ಮದ್ಯದ ಅಂಗಡಿ ಇದೆ. ಪ್ರತಿ ಬಡಾವಣೆಯಲ್ಲೂ ಮದ್ಯದ ಅಂಗಡಿಗಳನ್ನು ತೆರೆಯಲಾಗುತ್ತಿದೆ ಎಂಬ ವಾಂಗ್ಚೂಕ್ ಹೇಳಿಕೆ ಆಧಾರರಹಿತವಾದದ್ದು. ಲಡಾಖ್‌ನಾದ್ಯಂತ 50 ರೆಸ್ಟೋರೆಂಟ್‌ಗಳೊಂದಿಗೆ ಅನುಮತಿ ಪಡೆದ ಚಿಲ್ಲರೆ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ' ಎಂದು ತಿಳಿಸಿದೆ.
'ಲಡಾಖ್‌ನ ಕೇಂದ್ರಾಡಳಿತ ಪ್ರದೇಶದ ಆಡಳಿತವು ಸೋನಮ್ ವಾಂಗ್ಚೂಕ್ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದೆ. ಇಂತಹ ಹೇಳಿಕೆಗಳನ್ನು 'ಸುಳ್ಳು', 'ಆಧಾರರಹಿತ'' ಮತ್ತು 'ಕಲ್ಪಿತ' ಎಂದು ಸ್ಪಷ್ಟಪಡಿಸುತ್ತದೆ. ವದಂತಿಗಳನ್ನು ಹರಡದಂತೆ ವಾಂಗ್ಚೂಕ್ ಅವರಿಗೆ ಎಚ್ಚರಿಕೆ ನೀಡುತ್ತೇವೆ' ಎಂದಿದೆ.
ಅಕ್ಟೋಬರ್ 22ರಂದು ನವದೆಹಲಿಯಲ್ಲಿರುವ ಲಡಾಖ್ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಾಂಗ್ಚೂಕ್, 'ಸಾರ್ವಜನಿಕರ ವಿರೋಧದ ನಡುವೆಯೂ ಲೆಫ್ಟಿನೆಂಟ್ ಗವರ್ನರ್ ಅವರು ಮದ್ಯದ ಅಂಗಡಿಗಳನ್ನು ತೆರೆಯಲು ಉತ್ತೇಜನ ನೀಡುತ್ತಿದ್ದಾರೆ' ಎಂದು ಆರೋಪಿಸಿದ್ದರು.
ಮದ್ಯದ ಅಂಗಡಿಗಳು ಮತ್ತು ಬಾರ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ವಿರೋಧಿಸಿ ನೂರಾರು ಮಹಿಳೆಯರು ಲಡಾಖ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದರು.
'ಲೆಫ್ಟಿನೆಂಟ್ ಗವರ್ನರ್ ಅವರು ಏಕಪಕ್ಷೀಯವಾಗಿ ವರ್ತಿಸುತ್ತಿದ್ದಾರೆ. ಈಗಲೂ, 500ರಿಂದ 1,000 ಮಹಿಳೆಯರು ಅಲ್ಲಿ ಧರಣಿ ನಡೆಸುತ್ತಿದ್ದಾರೆ. ಲಡಾಖ್‌ನಲ್ಲಿ ಮದ್ಯ ಮಾರಾಟ ಮತ್ತು ಸೇವನೆಯನ್ನು ಬಲವಂತವಾಗಿ ಉತ್ತೇಜಿಸುತ್ತಿರುವುದು ಏಕೆ? ಎಂದು ಕೇಳುತ್ತಿದ್ದಾರೆ' ಎಂದಿದ್ದರು.
ಲಡಾಖ್‌ನ ಎಲ್ಲೆಡೆ ಮದ್ಯದ ಅಂಗಡಿಗಳನ್ನು ತೆರೆಯಲು ಎರಡು ತಿಂಗಳ ಹಿಂದೆ ಸರ್ಕಾರ ಮಾಡಿರುವ ನಿರ್ಧಾರದ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲವು ಬಾರಿ ಲಿಖಿತ ಮನವಿಯನ್ನೂ ಸಲ್ಲಿಸಿದ್ದಾರೆ ಎಂದಿರುವ ವಾಂಗ್ಚೂಕ್, 'ಲಡಾಕ್‌ನ ಪ್ರತಿಯೊಂದು ಬೀದಿ, ಬಡಾವಣೆಯಲ್ಲೂ, ಪ್ರತಿ ಶಾಲೆಯ ಹತ್ತಿರವೂ ಬಾರ್‌ಗಳನ್ನು ಬಲವಂತವಾಗಿ ತೆರೆಯಲಾಗುತ್ತಿದೆ' ಎಂದು ಕಿಡಿಕಾರಿದ್ದರು.
ಆರೋಪಗಳನ್ನು ತಳ್ಳಿಹಾಕಿರುವ ಆಡಳಿತ, 'ಹೊಸ ಅಬಕಾರಿ ನೀತಿ 2026-27 ಕುರಿತು 2026ರ ಜೂನ್ 1ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಸಲಹೆ ಬಳಿಕ ಅದನ್ನು ಆಗಸ್ಟ್ 26ರಂದು ಹಿಂಪಡೆಯಲಾಗಿದೆ' ಎಂದು ಸ್ಪಷ್ಟಪಡಿಸಿದೆ.
'ಹೊಸ ನೀತಿ ಅಡಿಯಲ್ಲಿ ಹೊಸದಾಗಿ ಮದ್ಯದಂಗಡಿಗಳನ್ನು ತೆರೆಯುವ ಪ್ರಸ್ತಾವನೆಯನ್ನು ಹಿಂಪಡೆಯಲಾಗಿದೆ. ಸಂಬಂಧಿತ ಹರಾಜು ಪ್ರಕ್ರಿಯೆಯನ್ನು ರದ್ದುಮಾಡಲಾಗಿದೆ. ಹಳೆಯ ಅಬಕಾರಿ ನೀತಿ 2025-26 ಅನ್ನು ಮುಂದುವರಿಸಲಾಗಿದೆ' ಎಂದೂ ಹೇಳಿದೆ.


