ತಿರುವನಂತಪುರಂ: ಕೇರಳಂನ ಅರಣ್ಯಗಳಲ್ಲಿ ಕಾಡಾನೆಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕಾಡಾನೆಗಳ ಸಂಖ್ಯೆ ಕಡಿಮೆಯಾಗಲು ಕಾರಣಗಳೇನು ಎಂಬುದನ್ನು ಪತ್ತೆಹಚ್ಚಲು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ತಿರುವನಂತಪುರಂನಲ್ಲಿ ನಡೆದ 'ವನ ಸ್ಪಂದನಂ' ಎಂಬ ಮೂರು ದಿನಗಳ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ಕಾಡಾನೆಗಳ ಸರಣಿ ಸಾವಿನ ಕುರಿತು ಸಿಬಿಐ ಅಥವಾ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಆಗ್ರಹ ಕೇಳಿಬಂದಿದೆ.
ಆನೆಗಳು ಪದೇ ಪದೇ ಸಾವಿಗೀಡಾಗುತ್ತಿರುವ ಬಗ್ಗೆ ವನ್ಯಜೀವಿ ಸಪ್ತಾಹದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಲಾಗಿದೆ ಎಂದು ವಯನಾಡು ಪ್ರಕೃತಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎನ್. ಬಾಬುಷಾ ತಿಳಿಸಿದ್ದಾರೆ.
'ಕಳೆದ ಕೆಲವು ವರ್ಷಗಳಲ್ಲಿ ಕಾಡಾನೆಗಳ ಸಂಖ್ಯೆ ಶೇಕಡ 50ರಷ್ಟು ಕಡಿಮೆಯಾಗಿದೆ. ಆನೆ ದಂತ ಕಳ್ಳಸಾಗಣೆ ನಡೆಯುತ್ತಿದೆ ಎಂಬ ಬಲವಾದ ಅನುಮಾನಗಳಿವೆ. ದಂತ ಇರುವ ಗಂಡಾನೆಗಳನ್ನು ಸ್ಥಳಾಂತರಿಸಲು ಹೇರಲಾಗುತ್ತಿರುವ ಒತ್ತಡವು ಆನೆಗಳ ಸಂತಾನೋತ್ಪತ್ತಿ ಕುಸಿತಕ್ಕೆ ಕಾರಣವಾಗಬಹುದು. ಸತ್ಯಾಸತ್ಯತೆಯನ್ನು ಹೊರತರಲು ವಿವರವಾದ ತನಿಖೆ ಅಗತ್ಯವಿದೆ' ಎಂದು ಬಾಬುಷಾ ಹೇಳಿದ್ದಾರೆ.
2005ರಲ್ಲಿ 5,135ರಷ್ಟಿದ್ದ ಕಾಡಾನೆಗಳ ಸಂಖ್ಯೆ 2023ರ ವೇಳೆಗೆ 2,386ಕ್ಕೆ ಕುಸಿದಿತ್ತು. ಪ್ರಸ್ತುತ ಈ ಸಂಖ್ಯೆ 1,900ಕ್ಕೆ ಕುಸಿದಿದೆ ಎಂದೂ ವರದಿಗಳು ತಿಳಿಸಿವೆ.
ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳ ಒಕ್ಕೂಟವಾದ 'ಕೋ-ಎಕ್ಸಿಸ್ಟೆನ್ಸ್ ಕಲೆಕ್ಟಿವ್ ಕೇರಳಂ', ಕೇರಳಂ ರಾಜ್ಯ ಕೇಂದ್ರ ಗ್ರಂಥಾಲಯದ ಸಹಯೋಗದೊಂದಿಗೆ ಅಕ್ಟೋಬರ್ 5ರಿಂದ 7ರವರೆಗೆ ಈ ಮೂರು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಆನೆಗಳ ಸಂಚಾರ ಪಥದಲ್ಲಿದ್ದ (ಕಾರಿಡಾರ್) ಅಡೆತಡೆಗಳನ್ನು ನಿವಾರಿಸುವಂತೆ ಸುಪ್ರೀಂ ಕೋರ್ಟ್ನ ಇತ್ತೀಚಿಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶವನ್ನು ವಿರೋಧಿಸಿ ಇಡುಕ್ಕಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಡೆಸಲಾಗಿತ್ತು.
ವನ್ಯಜೀವಿ ಸಪ್ತಾಹದಲ್ಲಿ ಇಡುಕ್ಕಿ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಯಿತು.



