ಕೊಚ್ಚಿ: CMRL-Exalogic ಹಣ ಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಅವರ ಪುತ್ರಿ ವೀಣಾ ಹಾಗೂ ಅಳಿಯ ಮೊಹಮ್ಮದ್ ರಿಯಾಸ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ ಎಂದು livelaw.in ವರದಿ ಮಾಡಿದೆ.
ಕಳೆದ ವಾರ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅಡ್ವೊಕೇಟ್ ಜನರಲ್ ಕೆ.ಜಾಜು ಬಾಬು, ಅರ್ಜಿದಾರರ ಪರ ವಕೀಲ ವಿ. ಸೇತುನಾಥ್ ಹಾಗೂ ಜಾರಿ ನಿರ್ದೇಶನಾಲಯದ (ED) ಪರ ವಕೀಲ ಜೈಶಂಕರ್ ವಿ. ನಾಯರ್ ಅವರ ವಾದಗಳನ್ನು ಸುದೀರ್ಘವಾಗಿ ಆಲಿಸಿ ತೀರ್ಪನ್ನು ಕಾಯ್ದಿರಿಸಿತ್ತು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ಸೆಕ್ಷನ್ 66(2)ರ ಅಡಿಯಲ್ಲಿ ED ಮಾಹಿತಿ ನೀಡಿದಾಗ, ರಾಜ್ಯ ಪೊಲೀಸರು ಪ್ರಾಥಮಿಕ ತನಿಖೆ ನಡೆಸದೆಯೇ ಎಫ್ಐಆರ್ ದಾಖಲಿಸುವುದು ಕಡ್ಡಾಯವೇ ಎಂಬ ಕಾನೂನು ಪ್ರಶ್ನೆಯನ್ನು ನ್ಯಾಯಾಲಯ ಪರಿಗಣಿಸಿತ್ತು.
ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದರೆ ಪ್ರಾಥಮಿಕ ತನಿಖೆಗೆ ಅವಕಾಶವಿಲ್ಲ. ರಾಜ್ಯ ಪೊಲೀಸರು ತಕ್ಷಣವೇ ಎಫ್ಐಆರ್ ದಾಖಲಿಸಬೇಕಿತ್ತು ಎಂದು ED ಹಾಗೂ ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ವಿಜಿಲೆನ್ಸ್ ಇಲಾಖೆಯ ಸದಸ್ಯರಿಲ್ಲದೆಯೇ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಿರುವುದನ್ನೂ ಅರ್ಜಿದಾರರು ಆಕ್ಷೇಪಿಸಿದ್ದರು. ಸಚಿವ ಸಂಪುಟದ ನಿರ್ಧಾರವಿಲ್ಲದೆ ಇಂತಹ ತಂಡವನ್ನು ರಚಿಸಲು ಸಾಧ್ಯವಿಲ್ಲ. ಸರಕಾರದ ಆದೇಶದ ಪ್ರಕಾರವೂ ಇದೇ ಕಾನೂನು ಅನ್ವಯಿಸುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.
ತನಿಖೆಯ ವೇಳೆ ಪತ್ತೆಯಾದ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಪೊಲೀಸ್ ಮುಖ್ಯಸ್ಥರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ED ಪರ ವಕೀಲರು ತಿಳಿಸಿದ್ದರು. ತನಿಖೆ ನಡೆಸಬೇಕಾದ ಕೆಲವು ವಹಿವಾಟುಗಳಿಗೆ ಸಂಬಂಧಿಸಿದ ದಾಖಲೆಗಳು EDಗೆ ಲಭ್ಯವಾಗಿದ್ದವು. ಇವು ಮೂಲ ಅಪರಾಧಗಳಿಗೆ ಸಂಬಂಧಿಸಿದ್ದರಿಂದ ರಾಜ್ಯ ಪೊಲೀಸರು ಅಥವಾ ವಿಜಿಲೆನ್ಸ್ ಇಲಾಖೆಯು ತನಿಖೆ ನಡೆಸಬೇಕಿತ್ತು ಎಂದು ಅವರು ವಾದಿಸಿದ್ದರು.
ಯಾವುದೇ ತನಿಖಾ ಸಂಸ್ಥೆಗೆ ಹೆಚ್ಚಿನ ಪರಿಶೀಲನೆಯ ಅಗತ್ಯವಿದೆ ಎಂದು ಅನಿಸಿದರೆ ಪ್ರಾಥಮಿಕ ತನಿಖೆ ನಡೆಸುವುದು ಸೂಕ್ತ ಎಂದು ಅಡ್ವೊಕೇಟ್ ಜನರಲ್ ವಾದಿಸಿದ್ದರು. ED ಪೊಲೀಸರಂತೆ ತನಿಖೆ ನಡೆಸುವ ಸಂಸ್ಥೆಯಲ್ಲ; ಅದು ಮುಖ್ಯವಾಗಿ ಮಾಹಿತಿ ಸಂಗ್ರಹಿಸುವ ಸಂಸ್ಥೆಯಾಗಿದೆ ಎಂದೂ ಅವರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅಲ್ಲದೆ, ಅರ್ಜಿಯನ್ನು ಅವಧಿಗೆ ಮುನ್ನವೇ ಸಲ್ಲಿಸಲಾಗಿದೆ. ಹೀಗಾಗಿ, ಅದನ್ನು ಕಾನೂನುಬದ್ಧವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದೂ ವಾದಿಸಿದ್ದರು.
ಪ್ರಕರಣದ ಹಿನ್ನೆಲೆ:
EDಯ ಪ್ರಕರಣದ ಪ್ರಕಾರ, ಸಾರ್ವಜನಿಕ ವಲಯದ ಕಂಪೆನಿಯಾದ ಸಿಎಂಆರ್ಎಲ್ (ಕೊಚ್ಚಿನ್ ಮಿನರಲ್ಸ್ ಆಯಂಡ್ ರುಟೈಲ್ ಲಿಮಿಟೆಡ್), 2017ರಿಂದ 2020ರ ಅವಧಿಯಲ್ಲಿ ವೀಣಾ ಟಿ.ಅವರಿಗೆ ಸಂಬಂಧಿಸಿದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ಗೆ ಯಾವುದೇ ವಾಸ್ತವಿಕ ಸೇವೆಗಳನ್ನು ಪಡೆಯದೆಯೇ ಮಾಸಿಕ ಪಾವತಿಗಳನ್ನು ಮಾಡಿದೆ ಎಂಬ ಆರೋಪವಿದೆ. ಈ ಅವಧಿಯಲ್ಲಿ ಕಂಪೆನಿ ಒಟ್ಟು 1.72 ಕೋಟಿ ರೂ. ಪಾವತಿಸಿದೆ ಎಂದು ED ಆರೋಪಿಸಿದೆ.
ಈ ವರ್ಷದ ಆರಂಭದಲ್ಲಿ, ED ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಿಎಂಆರ್ಎಲ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ನ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠ ವಜಾಗೊಳಿಸಿದ್ದವು.
ಪ್ರಸ್ತುತ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಆಗಸ್ಟ್ 19ರಂದು ED ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಹವಾಲಾ ವಹಿವಾಟುಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿತ್ತು. ಈ ವಹಿವಾಟುಗಳ ಮೂಲಕ ಆರೋಪಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ)ಯ ಅಡಿಯಲ್ಲಿ ಅಪರಾಧ ಎಸಗಿದ್ದಾರೆ ಎಂದು ED ಆರೋಪಿಸಿತ್ತು.



