HEALTH TIPS

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಯುಎಇಯ ಲಾನಾ ನುಸೈಬ ಸ್ಪರ್ಧೆ

ನ್ಯೂಯಾರ್ಕ್: ವಿಶ್ವಸಂಸ್ಥೆಯ (ಯುಎನ್) ಮುಂದಿನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುವುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ರಾಜ್ಯ ಸಚಿವೆಯಾಗಿರುವ ಹಾಗೂ ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟದ ರಾಯಭಾರಿಯಾಗಿರುವ ಲಾನಾ ನುಸೈಬ ಘೋಷಿಸಿದ್ದಾರೆ. 


ಯುಎಇ ಸರಕಾರ ಅಧಿಕೃತವಾಗಿ ಅವರ ಹೆಸರನ್ನು ನಾಮನಿರ್ದೇಶನ ಮಾಡಿದ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ.

ಆಂಟೋನಿಯೊ ಗುಟೆರಸ್ ಅವರ ಎರಡನೇ ಅವಧಿ 2026ರ ಡಿಸೆಂಬರ್ 31ರಂದು ಮುಕ್ತಾಯಗೊಳ್ಳಲಿದ್ದು, ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯ ಭಾಗವಾಗಿ ಅಕ್ಟೋಬರ್ 16ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇತ್ತೀಚಿನ ಅನೌಪಚಾರಿಕ ಮತದಾನ ನಡೆಸಿತ್ತು.

ತಮ್ಮ ಉಮೇದುವಾರಿಕೆಯನ್ನು ಘೋಷಿಸುವ ವೇಳೆ ಮಾತನಾಡಿದ ನುಸೈಬ, "ನನ್ನ ವೃತ್ತಿಜೀವನದ ಬಹುಭಾಗವನ್ನು ವಿಶ್ವಸಂಸ್ಥೆಯೊಳಗೆ ಮತ್ತು ಅದರೊಂದಿಗೆ ಕೆಲಸ ಮಾಡುವುದರಲ್ಲಿ ಕಳೆದಿದ್ದೇನೆ. ದೃಢಸಂಕಲ್ಪದ ರಾಜತಾಂತ್ರಿಕತೆಯಿಂದ ಏನೆಲ್ಲ ಸಾಧಿಸಬಹುದು ಎಂಬುದನ್ನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಆಳವಾದ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ದೇಶಗಳು ಒಮ್ಮತಕ್ಕೆ ಬರುವುದನ್ನು, ಒಪ್ಪಂದ ಸಾಧ್ಯವೇ ಇಲ್ಲ ಎಂದು ಜನರು ಭಾವಿಸಿದ ಸಂದರ್ಭಗಳಲ್ಲೂ ಒಮ್ಮತ ಮೂಡುವುದನ್ನು ನೋಡಿದ್ದೇನೆ" ಎಂದರು.

"ಆದರೆ, ರಾಜತಾಂತ್ರಿಕತೆ ವಿಫಲವಾದಾಗ ಅದರ ಬೆಲೆಯನ್ನೂ ಕಂಡಿದ್ದೇನೆ. ನಾವು ನೀಡುವ ಭರವಸೆ ಮತ್ತು ಅದನ್ನು ಈಡೇರಿಸುವುದರ ನಡುವಿನ ಅಂತರ ಹೆಚ್ಚಾದಾಗ ವಿಶ್ವಾಸ ಕುಸಿಯುತ್ತದೆ. ಅದರೊಂದಿಗೆ ಕಾರ್ಯನಿರ್ವಹಿಸುವ ನಮ್ಮ ಸಾಮರ್ಥ್ಯವೂ ದುರ್ಬಲವಾಗುತ್ತದೆ. ಹೆಚ್ಚು ತುರ್ತಾಗಿ ಕಾರ್ಯನಿರ್ವಹಿಸಬೇಕಾದ ಸಮಯ ಇದಾಗಿದೆ ಎಂಬ ನಂಬಿಕೆಯಿಂದ ನಾನು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸ್ಪರ್ಧಿಸುತ್ತಿದ್ದೇನೆ. ಸಮಸ್ಯೆಗಳು ಉಲ್ಬಣಿಸುವ ಮೊದಲೇ ಕ್ರಮ ಕೈಗೊಳ್ಳುವುದು, ಭಿನ್ನಾಭಿಪ್ರಾಯಗಳ ನಡುವೆಯೂ ಜನರನ್ನು ಒಗ್ಗೂಡಿಸುವುದು ಮತ್ತು ಸ್ಪಷ್ಟ ಫಲಿತಾಂಶ ದೊರೆಯುವವರೆಗೆ ಕಾರ್ಯವನ್ನು ಮುಂದುವರಿಸುವುದು ಅಗತ್ಯ. ವಿಶ್ವಸಂಸ್ಥೆಯ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸಲು ಮತ್ತು ಅದು ಸೇವೆ ಸಲ್ಲಿಸಬೇಕಾದ ಜನರ ಜೀವನದಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಇದೇ ಮಾರ್ಗ" ಎಂದು ಹೇಳಿದರು.

ತಮ್ಮ ಉಮೇದುವಾರಿಕೆಗೆ ಸಂಪೂರ್ಣ ಗಮನ ನೀಡುವ ಸಲುವಾಗಿ ನುಸೈಬ ಯುಎಇ ಸರಕಾರದಲ್ಲಿನ ತಮ್ಮ ಹುದ್ದೆಯಿಂದ ತಾತ್ಕಾಲಿಕ ರಜೆ ಪಡೆದಿದ್ದಾರೆ.

ಅವರು ಪ್ರಕಟಿಸಿರುವ ಹೇಳಿಕೆಯಲ್ಲಿ ಶಾಂತಿ ಮತ್ತು ಭದ್ರತೆಗೆ ಪ್ರಮುಖ ಆದ್ಯತೆ, ಸಂಘರ್ಷಗಳನ್ನು ತಡೆಯಲು, ರಾಜತಾಂತ್ರಿಕ ಮಾತುಕತೆಗಳ ಮಾರ್ಗಗಳನ್ನು ಉಳಿಸಿಕೊಳ್ಳಲು ಮತ್ತು ಸಂಘರ್ಷದಲ್ಲಿರುವ ಪಕ್ಷಗಳ ನಡುವೆ ಪ್ರಾಯೋಗಿಕ ಒಪ್ಪಂದಗಳನ್ನು ರೂಪಿಸಲು ವಿಶ್ವಸಂಸ್ಥೆ ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಲಾಗಿದೆ.

ವಿವಾದಗಳು ಉಲ್ಬಣಗೊಳ್ಳದಂತೆ ತಡೆಯಲು ವಿಶ್ವಸಂಸ್ಥೆಯು ತೆರೆಮರೆಯ ರಾಜತಾಂತ್ರಿಕತೆಯನ್ನು ಬಳಸಬೇಕು. ತಕ್ಷಣವೇ ಜನರ ಸಂಕಷ್ಟವನ್ನು ಕಡಿಮೆ ಮಾಡುವ ಹಾಗೂ ಭವಿಷ್ಯದಲ್ಲಿ ವಿಸ್ತೃತ ರಾಜಕೀಯ ಒಪ್ಪಂದಗಳಿಗೆ ಅವಕಾಶ ಕಲ್ಪಿಸುವ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ನುಸೈಬ ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries