ಮುಳ್ಳೇರಿಯ: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಟಾರು ವೆಳ್ಳಕಡವು ನಿವಾಸಿ ಸದಾನಂದ ಎಂಬವರ ಮನೆ ಬಾಗಿಲು ಒಡೆದು ಹಾಡಹಗಲು ಏಳುವರೆ ಪವನು ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಳಂ ಪನಂಗಾಡ್, ಎಳಕೋಲ್ ನಿವಾಸಿ ಅಭಿರಾಜ್ (33) ಹಾಗೂ ಕೊಲ್ಲಂ ಪತ್ತನಾಪುರಂ ನಿವಾಸಿ ಆದಿತ್ಯನ್ (36) ಬಂಧಿತರು.
ಸೆ.20ರಂದು ಬೆಳಗ್ಗೆ 8.30ರಿಂದ ಮಧ್ಯಾಹ್ನ 2 ಗಂಟೆಯೊಳಗಿನ ಅವಧಿಯಲ್ಲಿ ಕಳವು ನಡೆದಿದೆ. ಮನೆಯವರು ಕೆಲಸಕ್ಕೆ ತೆರಳಿದ್ದ ಸಂದರ್ಭ ಅಡುಗೆಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಮಲಗುವ ಕೋಣೆಯ ಅಲಮಾರಿಯಲ್ಲಿ ಇಟ್ಟಿದ್ದ ಚಿನ್ನಾಭರಣ ದೋಚಿದ್ದರು. ಆಸುಪಾಸಿನಲ್ಲಿ ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಆರೋಪಿಗಳ ಪತ್ತೆ ಜಟಿಲವಾಗಿತ್ತು.
ಹೆಲ್ಮೆಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಬೈಕ್‍ನಲ್ಲಿ ತೆರಳಿರುವ ಬಗ್ಗೆ ಸ್ಥಳೀಯ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯನ್ವಯ ಘಟನಾ ಸ್ಥಳದಿಂದ ಮೂರು ಕಿ.ಮೀ ಆಚೆಗಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ತಪಾಸಣೆ ನಡೆಸಿ ಆರೋಪಿಗಳನ್ನು ಬಂಧಿಸಲು ಸಹಕಾರಿಯಾಗಿದೆ.


