ನವದೆಹಲಿ: ದೇಶದಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕೆಂಬ ವಿಷಯಕ್ಕೆ ಸಂಬಂಧಿಸಿದಂತೆ ಸಾಂವಿಧಾನಿಕ ತತ್ವಗಳ ಆಧಾರದಲ್ಲಿ ಕೆಲವು ಮಾರ್ಗಸೂಚಿಗಳನ್ನು ರೂಪಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಒಲವು ವ್ಯಕ್ತಪಡಿಸಿದೆ.
ಈ ವಿಷಯದಲ್ಲಿ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟತೆ ಇಲ್ಲದಿರುವ ಕಾರಣ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಗ್ರಾಮೀಣ ಸೇವೆ ಕಡ್ಡಾಯಗೊಳಿಸುವ ಕಾಯ್ದೆಯನ್ನು 2012ರಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿತ್ತು. ಕಾಯ್ದೆಯ ನಿಯಮಗಳಂತೆ ಸರ್ಕಾರಿ ವೈದ್ಯಕೀಯ ಕೋಟಾದಲ್ಲಿ ಸೀಟು ಪಡೆದು ವೈದ್ಯಕೀಯ ಪದವಿ (ಎಂಬಿಬಿಎಸ್) ಮುಗಿಸಿದವರು ಕನಿಷ್ಠ ಒಂದು ವರ್ಷ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸಬೇಕು. ಆ ನಂತರವೇ ಅಂತಹ ವಿದ್ಯಾರ್ಥಿಗಳು ಕರ್ನಾಟಕ ವೈದ್ಯಕೀಯ ಪರಿಷತ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಖಾಸಗಿ ಕೋಟಾದ ವಿದ್ಯಾರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸಬೇಕು ಎಂದು ಸರ್ಕಾರವು 2023ರ ಜುಲೈ 28ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಶೀಶ್ ರೆಡು ಎಂಬವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
ವೈದ್ಯಕೀಯ ವಿದ್ಯಾರ್ಥಿಗಳ ಕಡ್ಡಾಯ ಗ್ರಾಮೀಣ ಸೇವೆ ಕುರಿತು ಏಕರೂಪದ ರಾಷ್ಟ್ರೀಯ ನೀತಿ ರೂಪಿಸುವ ಅಗತ್ಯ ಇದೆ ಎಂದು ನ್ಯಾಯಪೀಠವು ಹಿಂದಿನ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿತ್ತು. ಇಡೀ ದೇಶಕ್ಕೆ ಅನ್ವಯವಾಗುವ ಇಂತಹ ನೀತಿಯ ಕುರಿತು ಕೇಂದ್ರ ಸರ್ಕಾರದಿಂದ ನಿರ್ದೇಶನಗಳನ್ನು ಪಡೆದು ಪ್ರಮಾಣಪತ್ರ ಸಲ್ಲಿಸುವುದಾಗಿ ಸಾಲಿಸಿಟರ್ ಜನರಲ್ ತಿಳಿಸಿದ್ದರು.
'ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೊಟೇಷನ್ ಆಧಾರದಲ್ಲಿ ಕಡ್ಡಾಯ ಸೇವೆಯ ಅವಶ್ಯಕತೆಯಿದೆ. ಆದರೆ, ಪದವಿ ಹಂತದಲ್ಲಿ ಇಂತಹ ಯಾವುದೇ ವ್ಯವಸ್ಥೆಯಿಲ್ಲ. ಆರೋಗ್ಯವು ರಾಜ್ಯ ಪಟ್ಟಿಗೆ ಸೇರಿದ ವಿಷಯವಾಗಿರುವುದರಿಂದ, ಅನೇಕ ರಾಜ್ಯಗಳು ಇಂತಹ ಕಡ್ಡಾಯ ಸೇವೆಗಾಗಿ ಬಾಂಡ್‌ಗಳನ್ನು ಜಾರಿಗೆ ತಂದಿವೆ' ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ತಿಳಿಸಿದರು.
ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ರಾಜು ರಾಮಚಂದ್ರನ್, 'ಶಾಸನಬದ್ಧ ಕೊರತೆಗಳನ್ನು ನೀಗಿಸಲು ಸಂವಿಧಾನದ 21ನೇ ವಿಧಿಯ ಆಧಾರದಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು' ಎಂದು ಸಲಹೆ ನೀಡಿದರು. ಕೇಂದ್ರ ಸರ್ಕಾರವು ಸಮಾಲೋಚನಾ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ಭಾಟಿ ಅಭಿಪ್ರಾಯಪಟ್ಟರು.
ಈ ವಿಷಯವು ಭಾರತದಲ್ಲಿ ವೈದ್ಯಕೀಯ ಸೇವೆಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಕೇಂದ್ರದ ನಿಲುವು ಸ್ಪಷ್ಟವಾಗಿಲ್ಲ ಮತ್ತು ನೀತಿಯ ಕೊರತೆ ಇರುವಂತೆ ತೋರುತ್ತಿದೆ ಎಂದು ನ್ಯಾಯಮೂರ್ತಿ ನರಸಿಂಹ ಬೇಸರ ವ್ಯಕ್ತಪಡಿಸಿದರು.
'ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವುದು ನಮ್ಮ ಆರೋಗ್ಯ ವ್ಯವಸ್ಥೆಯ ಹಾಗೂ ರಾಷ್ಟ್ರೀಯ ಆರೋಗ್ಯದ ಸುಧಾರಣೆಗೆ ಅಗತ್ಯವಾದ ಕ್ರಮವೇ ಅಥವಾ ಅಲ್ಲವೇ ಎಂಬ ವಿಷಯದ ಬಗ್ಗೆ ನೀತಿ ನಿರೂಪಕರು ಯಾವ ಅಭಿಪ್ರಾಯ ಹೊಂದಿದ್ದಾರೆ ಎಂಬುದು ಮುಖ್ಯ ಪ್ರಶ್ನೆ. ಇದನ್ನು 'ಬಾಂಡ್' (ಒಪ್ಪಂದ ಪತ್ರ) ಅಥವಾ ನಿಯಮಾವಳಿಯ ರೂಪದಲ್ಲಿ ಹೇಗೆ ಜಾರಿಗೊಳಿಸಬೇಕು ಎಂಬುದು ಎರಡನೇ ಪ್ರಶ್ನೆ. ಆದರೆ, ಮೂಲ ತತ್ವದಲ್ಲೇ ಸ್ಪಷ್ಟತೆಯ ಕೊರತೆಯಿದೆ. ಈ ಬಗ್ಗೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ, ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕು' ಎಂದು ಅವರು ಸೂಚಿಸಿದರು.
ಈ ವಿಷಯದ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿತು. ಕೇಂದ್ರ ಸರ್ಕಾರವು ಯಾವುದೇ ನೀತಿ ರೂಪಿಸಲು ಉದ್ದೇಶಿಸಿದೆಯೇ ಹಾಗೂ ಅದಕ್ಕಾಗಿ ಯಾರೊಂದಿಗೆ ಸಮಾಲೋಚನೆ ನಡೆಸಲಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಪೀಠ ಸೂಚಿಸಿತು.



