ನವದೆಹಲಿ: ಗ್ರೀನ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿಕೆ 'ಅನಗತ್ಯ ಹಾಗೂ ಆಧಾರರಹಿತ' ಎಂದು ಭಾರತೀಯ ವಿದೇಶಾಂಗ ಸಚಿವಾಲಯ (ಎಂಇಎ) ತಳ್ಳಿ ಹಾಕಿದೆ.
ಎಚ್1ಬಿ ವೀಸಾದ ಅಡಿಯಲ್ಲಿ ಕೆಲಸಕ್ಕಾಗಿ ಅಮೆರಿಕಕ್ಕೆ ಬಂದಿರುವ ಉದ್ಯೋಗಿಗಳಿಗೆ ಕಂಪನಿ ವತಿಯಿಂದಲೇ ಗ್ರೀನ್ ಕಾರ್ಡ್ ಒದಗಿಸಿಕೊಡುವ ಯೋಜನೆಯಿಂದ ಮೈಕ್ರೋಸಾಫ್ಟ್, ಟಾಟಾ, ಇನ್ಫೊಸಿಸ್, ವಿಪ್ರೊ ಸೇರಿದಂತೆ ಎಂಟು ಸಂಸ್ಥೆಗಳನ್ನು ಟ್ರಂಪ್ ಆಡಳಿತವು ಅಮಾನತುಗೊಳಿಸಿದೆ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಗುರುವಾರ ಪ್ರಕಟಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯವು, 'ಅಮೆರಿಕದ ಕಾರ್ಮಿಕ ಇಲಾಖೆಯ ನಿರ್ಧಾರದಿಂದ ಎಚ್-1ಬಿ ವೀಸಾ ಮಾನ್ಯತೆಗೆ ಧಕ್ಕೆಯಿಲ್ಲ' ಎಂದು ಹೇಳಿದೆ.
'ಪಿಇಆರ್‌ಎಂ ಮತ್ತು ಎಚ್-1ಬಿ ವೀಸಾ ಕಾರ್ಯಕ್ರಮಗಳು ಪರಸ್ಪರ ಭಿನ್ನವಾಗಿವೆ ಎಂಬುದನ್ನು ಗಮನಿಸಬೇಕಾಗಿದೆ. ಪ್ರಸ್ತುತ ಪಿಇಆರ್‌ಎಂ ಅರ್ಜಿಗಳ ಅಮಾನತು ನಿರ್ಧಾರದಿಂದಾಗಿ ಈಗಾಗಲೇ ಚಾಲ್ತಿಯಲ್ಲಿರುವ ಎಚ್-1ಬಿ ವೀಸಾಗಳ ಮಾನ್ಯತೆಗಾಗಲಿ, ವೀಸಾದಾರರು ಮತ್ತು ಅವರ ಅವಲಂಬಿತರ ಸ್ಥಾನಮಾನಕ್ಕಾಗಲಿ ಯಾವುದೇ ನೇರ ಧಕ್ಕೆಯಾಗುವುದಿಲ್ಲ. ಆದರೆ, ನಿರ್ಬಂಧಕ್ಕೆ ಒಳಗಾದ ಕಂಪನಿಗಳ ಅರ್ಹ ನೌಕರರ 'ಖಾಯಂ ನಿವಾಸಿ' ಅಥವಾ 'ಗ್ರೀನ್ ಕಾರ್ಡ್' ಪಡೆಯುವ ಪ್ರಕ್ರಿಯೆಯ ಮೇಲೆ ಅಲ್ಪಮಟ್ಟಿನ ಪರಿಣಾಮ ಬೀರುವ ಸಾಧ್ಯತೆಯಿದೆ' ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
'ಪ್ರತಿಭಾವಂತರ ಮುಕ್ತ ಸಂಚಾರವು ಭಾರತ ಹಾಗೂ ಅಮೆರಿಕ ಎರಡೂ ದೇಶಗಳ ಆರ್ಥಿಕತೆಗೂ ಮೌಲ್ಯವರ್ಧನೆ ತರುತ್ತದೆ' ಎಂದು ಉಲ್ಲೇಖಿಸಿದೆ.
'ಇದರಿಂದ ಭಾರತೀಯರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುವುದರ ಜತೆಗೆ, ಅಮೆರಿಕದ ಕಂಪನಿಗಳಿಗೆ ಅತ್ಯಾಧುನಿಕ ಪ್ರತಿಭೆ, ನಾವೀನ್ಯತೆ, ಸಂಶೋಧನೆ, ಸ್ಪರ್ಧಾತ್ಮಕತೆ ಹಾಗೂ ಉದ್ಯೋಗ ಸೃಷ್ಟಿಗೆ ನೆರವಾಗಲಿದ್ದು, ಅಲ್ಲಿನ ಷೇರುದಾರರ ಸಂಪತ್ತನ್ನು ಹೆಚ್ಚಿಸಲಿದೆ' ಎಂದು ಹೇಳಿದೆ.
'ಅಲ್ಲದೆ ಎರಡೂ ರಾಷ್ಟ್ರಗಳಿಗೂ ಪರಸ್ಪರ ಲಾಭದಾಯಕ ಕ್ಷೇತ್ರವಾಗಿದ್ದು, ಈ ವಾಸ್ತವವನ್ನು ಎಲ್ಲ ಸಂಬಂಧಪಟ್ಟ ಪಾಲುದಾರರು ಅರ್ಥಮಾಡಿಕೊಳ್ಳಬೇಕಿದೆ. ಆದರೆ ಅಮೆರಿಕ ಪ್ರಕಟಿಸಿರುವ ಇತ್ತೀಚಿನ ಕ್ರಮಗಳು ಎರಡೂ ದೇಶಗಳ ಜಂಟಿ ಮಹತ್ವಾಕಾಂಕ್ಷೆಗಳಿಗೆ ಪೂರಕವಾಗಿಲ್ಲ' ಎಂದು ಭಾರತ ಬೇಸರ ವ್ಯಕ್ತಪಡಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಮೆರಿಕದ ಉಪಾಧ್ಯಕ್ಷರು ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿರುವ ಸಚಿವಾಲಯ, ಅಂತಹ ಹೇಳಿಕೆಗಳು ಅನಗತ್ಯ ಹಾಗೂ ಆಧಾರರಹಿತ ಎಂದು ತಳ್ಳಿಹಾಕಿದೆ.
'ಅಮೆರಿಕದಲ್ಲಿರುವ ಭಾರತೀಯ ವೃತ್ತಿಪರರು ಅತ್ಯುನ್ನತ ಶಿಕ್ಷಣ ಪಡೆದವರಾಗಿದ್ದು, ಆ ದೇಶದ ಆರ್ಥಿಕತೆ ಮತ್ತು ನಾವೀನ್ಯ ಪರಿಸರಕ್ಕೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ಅಮೆರಿಕದ ಇತಿಹಾಸವೇ ವಲಸಿಗರ ಕಠಿಣ ಪರಿಶ್ರಮ, ಉದ್ಯಮಶೀಲತೆ ಮತ್ತು ನಾವೀನ್ಯತೆಯಿಂದ ರೂಪಿತಗೊಂಡಿದೆ. ಇತಿಹಾಸದ ಕರಾಳ ನೆನಪುಗಳು ಹಾಗೂ ವಸಾಹತುಶಾಹಿ ಪರಂಪರೆಯನ್ನು ನೆನಪಿಸುವಂತಹ ಪದಪ್ರಯೋಗಗಳನ್ನು ಮಾಡಿರುವುದು ತೀವ್ರ ಆಕ್ಷೇಪಾರ್ಹ' ಎಂದು ಭಾರತ ಅಸಮಾಧಾನ ಹೊರಹಾಕಿದೆ.
'ಈ ಬೆಳವಣಿಗೆಯನ್ನು ಭಾರತ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದೆ' ಎಂದೂ ವಿದೇಶಾಂಗ ಸಚಿವಾಲಯ ತಿಳಿಸಿದೆ.



