ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ವಿಬಿ ಜಿ ರಾಮ್ ಜಿ ಯೋಜನೆಯ ಭಾಗವಾಗಿ `ವಿಕಸಿತ ಗ್ರಾಮ ಪಂಚಾಯತಿ ಪ್ಲಾನ್' ತಯಾರಿಸುವ ಕುರಿತಾದ ಪ್ರಥಮ ಗ್ರಾಮಸಭೆ ಗಾಂಧಿ ಜಯಂತಿಯಂದು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಜರಗಿತು. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅಜಿತ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಮ್. ಅವರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರು ಉದ್ಘಾಟಿಸಿ ಮಾತನಾಡಿ, ಯೋಜನೆಯ ಮಹತ್ವ ಹಾಗೂ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮಸಭೆಯ ಪಾತ್ರದ ಕುರಿತು ಮಾತನಾಡಿದರು. ಮುಂದೆ ನಡೆಯುವ ವಾರ್ಡು ಮಟ್ಟದ ಗ್ರಾಮಸಭೆಗಳಲ್ಲಿ ನಮ್ಮ ಊರಿನ ಅಭಿವೃದ್ಧಿಗೆ ಬೇಕಾದ ಕಾಮಗಾರಿಗಳನ್ನು ನಡೆಸಲು ಹಾಗೂ ಜಲಸಂರಕ್ಷಣೆಗೆ ವಿಶೇಷ ಆದ್ಯತೆಯನ್ನು ನೀಡಿ ಮುಂದುವರಿಯಲು ಎಲ್ಲ ಸಹಕಾರವನ್ನು ಕೋರಿದರು. ಅಭಿವೃದ್ಧಿ ಸ್ಥಾಯಿಸಮಿತಿ ಅಧ್ಯಕ್ಷ ಹಮೀದ್ ಕೆಡೆಂಜಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ, ಮಾಹಿನ್ ಕೇಳೋಟ್, ಗಂಗಾಧರ ಗೋಳಿಯಡ್ಕ, ಹರೀಶ ಎ., ಮಧುಸೂದನ ಕಂಗಿಲ, ಶ್ಯಾಮಪ್ರಸಾದ ಸರಳಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ವಿಬಿ ಜಿ ರಾಮ್ ಜಿ ಪಂಚಾಯಿತಿ ನಿರ್ವಾಹಕಿ ಅಶ್ವತಿ ಕೆ. ಅವರು `ವಿಕಸಿತ ಗ್ರಾಮ ಪಂಚಾಯತಿ ಪ್ಲಾನ್' ತಯಾರಿಸುವ ಅಗತ್ಯತೆ ಮತ್ತು ಕೈಗೊಳ್ಳಬಹುದಾದ ಕಾಮಗಾರಿಗಳ ಕುರಿತು ವಿವರಿಸಿದರು. ವಿಬಿ ಜಿ ರಾಮ್ ಜಿ ಯೋಜನೆಯ ಅಧಿಕಾರಿಗಳು, ಯೋಜನೆಯ ನಿರ್ವಾಹಕರು, ಕಾರ್ಮಿಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

.jpg)
