ಕುಂಬಳೆ: ಕುಂಬಳೆ ಸಮೀಪದ ಅನಂತಪುರದಿಂದ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಲ್ಯಾಟರೈಟ್ ಮಣ್ಣನ್ನು ಸಾಗಿಸುತ್ತಿದ್ದ ಟಾರಸ್ ಲಾರಿಯನ್ನು ವಶಪಡಿಸಿಕೊಂಡ ಕುಂಭಳೆ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
ಬಂಧಿತನನ್ನು ಆಂಧ್ರಪ್ರದೇಶದ ನಿವಾಸಿ ವಿಠಲ್ ಶಿವಕೋಟಿ ಎಂದು ಗುರುತಿಸಲಾಗಿದೆ.
ಪೊಲೀಸರನ್ನು ಕಂಡು ಇತರ ಎರಡು ಟಾರಸ್ ಲಾರಿಗಳು ಹಾಗೂ ಎರಡು ಜೆಸಿಬಿಗಳ ಚಾಲಕರು ವಾಹನಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಚಾಲಕರು ಬಿಟ್ಟುಹೋದ ಲಾರಿಗಳು ಮತ್ತು ಜೆಸಿಬಿಗಳಿಗೆ ಪೊಲೀಸರು ಕಾವಲು ಏರ್ಪಡಿಸಿದ್ದಾರೆ.
ಅಮೂಲ್ಯ ಖನಿಜ ಸಂಪತ್ತಿನ ಭಾಗವಾಗಿರುವ ಮಣ್ಣನ್ನು ಟಾರಸ್ ಲಾರಿಗಳಲ್ಲಿ ತುಂಬಿಕೊಂಡು ಅನಂತಪುರದಿಂದ ಆಂಧ್ರಪ್ರದೇಶಕ್ಕೆ ಭಾರಿ ಪ್ರಮಾಣದಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಅಕ್ರಮ ಮಣ್ಣು ಸಾಗಾಟದ ವಿರುದ್ಧ ಪರಿಸರ ಹೋರಾಟಗಾರರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಸಾಗಾಟ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಪ್ರಕರಣವನ್ನು ಭೂವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


