ನವದೆಹಲಿ: ಕಳೆದ ವಾರ ದಿಲ್ಲಿಯಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಪತ್ರಕರ್ತರು, ಪ್ರತಿಭಟನಾಕಾರರು ಮತ್ತು ಇತರರ ಸಾಮೂಹಿಕ ಬಂಧನವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಪ್ರತಿವಾದಿಗಳಿಗೆ ನೋಟಿಸ್‌ಗಳನ್ನು ಹೊರಡಿಸಿದೆ.
ನೋಟಿಸ್‌ಗಳನ್ನು ಹೊರಡಿಸಿರುವುದನ್ನು ತಾನು ಸ್ವಾಗತಿಸುವುದಾಗಿ ಅರ್ಜಿದಾರರ ಪೈಕಿ ಒಂದಾಗಿರುವ ದಿಲ್ಲಿ ಪತ್ರಕರ್ತರ ಒಕ್ಕೂಟವು (ಡಿಯುಜೆ) ಹೇಳಿಕೆಯಲ್ಲಿ ತಿಳಿಸಿದೆ.
ಅ.11ರಂದು ಎಸ್‌ಐಆರ್ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದ 40ಕ್ಕೂ ಹೆಚ್ಚು ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಮತ್ತು ಅವರ ಮೊಬೈಲ್ ಫೋನ್‌ಗಳು, ಕ್ಯಾಮೆರಾಗಳು ಹಾಗೂ ಇತರ ವರದಿಗಾರಿಕೆ ಸಾಧನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಡಿಯುಜೆ ಪರ ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ.ಜಾಯಮಾಲ್ಯ ಬಾಗ್ಚಿ ಅವರ ಪೀಠಕ್ಕೆ ತಿಳಿಸಿದರು. ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಅವರೂ ಸಹಅರ್ಜಿದಾರರಾಗಿದ್ದು, ವಶಕ್ಕೆ ಪಡೆದವರಲ್ಲಿ ಸೇರಿದ್ದಾರೆ.
ಪತ್ರಕರ್ತರ ಜೀವನೋಪಾಯವು ಈ ಸಾಧನಗಳನ್ನು ಅವಲಂಬಿಸಿದೆ. ಪೊಲೀಸರು ಅವುಗಳನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಸಿಂಗ್ ವಾದಿಸಿದರು. ಇದು ಪತ್ರಕರ್ತರ ಸಾಧನಗಳ ಶೋಧ ಮತ್ತು ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಹಾಗೂ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪತ್ರಕರ್ತರ ಸಾಧನಗಳು ಮತ್ತು ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಕೂಡದು ಎಂದು ನ್ಯಾ.ಬಾಗ್ಚಿ ಅಭಿಪ್ರಾಯಿಸಿದರು. ವಿಷಯದ ಗಂಭೀರತೆಯನ್ನು ಗಮನಕ್ಕೆ ತೆಗೆದುಕೊಂಡು ಸರ್ವೋಚ್ಚ ನ್ಯಾಯಾಲಯವು ನೋಟಿಸ್‌ಗಳನ್ನು ಹೊರಡಿಸಿತು.
ವಶಪಡಿಸಿಕೊಂಡ ಸಾಧನಗಳನ್ನು ತಕ್ಷಣ ಮರಳಿಸಬೇಕು, ಘಟನೆಗಳ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಮತ್ತು ಭವಿಷ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ವರದಿ ಮಾಡುವ ಪತ್ರಕರ್ತರಿಗೆ ರಕ್ಷಣೆ ನೀಡಬೇಕು ಎಂದು ಡಿಯುಜೆ ಕೋರಿದೆ. ವೀಡಿಯೊಗಳನ್ನು ಅಳಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ ಎಂದಿದೆ.
'ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ ಇಂಡಿಯಾ' (ಎನ್‌ಡಬ್ಲ್ಯುಎಂಐ) ಸಹ ಮಹಿಳಾ ಪತ್ರಕರ್ತರಿಗೆ ಅನಧಿಕೃತ ಬಂಧನದಿಂದ ರಕ್ಷಣೆ ಕೋರಿ ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದೆ.
ಪತ್ರಕರ್ತರೊಂದಿಗೆ ಪೊಲೀಸರ ಆಕ್ರಮಣಕಾರಿ ವರ್ತನೆಯು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಹೇಳಿದೆ.
ಪ್ರತ್ಯೇಕವಾಗಿ ಡಿಜಿಟಲ್ ಸುದ್ದಿ ವೇದಿಕೆ 'ಮೊಲಿಟಿಕ್ಸ್' ನ ಪತ್ರಕರ್ತ ಅಮನ್ ರಸ್ತೋಗಿ ಅವರು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘನೆಯನ್ನು ಆರೋಪಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಪತ್ರಕರ್ತರ ರಕ್ಷಣಾ ಸಮಿತಿಯ (ಸಿಪಿಜೆ) ಪ್ರಕಾರ, ಕಳೆದೆರಡು ದಿನಗಳಲ್ಲಿ ದಿಲ್ಲಿ, ಪುಣೆ ಮತ್ತು ಅಹಮದಾಬಾದ್‌ನಲ್ಲಿ ಕನಿಷ್ಠ 37 ಪತ್ರಕರ್ತರನ್ನು ತಾತ್ಕಾಲಿಕವಾಗಿ ಬಂಧಿಸಲಾಗಿದೆ.



