ನೈರೋಬಿ: ಕೀನ್ಯಾದಲ್ಲಿ ಎಬೋಲಾ ಸೋಂಕಿನಿಂದ ಮೊದಲ ಸಾವಾಗಿದೆ. ಕಾಂಗೊದಲ್ಲಿ ವಾಸವಿದ್ದ ಕೀನ್ಯಾ ವ್ಯಕ್ತಿ ದೇಶಕ್ಕೆ ಮರಳಿದ್ದರು. ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಅಡೆನ್ ಡುಯಾಲೆ ತಿಳಿಸಿದ್ದಾರೆ. ಮೃತ ವ್ಯಕ್ತಿಯ ಹೆಸರನ್ನು ಸಚಿವರು ಬಹಿರಂಗಪಡಿಸಿಲ್ಲ.
ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.
ಭೂಮರ್ಗದ ಮೂಲಕ ಉಗಾಂಡ ರಾಜಧಾನಿ ಕಂಪಾಲಾಗೂ ಭೇಟಿ ನೀಡಿದ್ದ ಅವರು, ಬಳಿಕ, ನೈರೋಬಿಗೆ ವಿಮಾನದ ಮೂಲಕ ಪ್ರಯಾಣಿಸಿದ್ದರು ಎಂದು ತಿಳಿಸಿದ್ದಾರೆ.
ಅನಾರೋಗ್ಯದ ಹಿನ್ನೆಲೆ ನಡೆಸಿದ ತಪಾಸಣೆ ವೇಳೆ ಅವರಿಗೆ ಎಬೋಲಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ದುರದೃಷ್ಟವಶಾತ್, ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಕುಟುಂಬ ಸದಸ್ಯರು ಮತ್ತು ಆರೋಗ್ಯ ಸಿಬ್ಬಂದಿ ಸೇರಿ 28 ಮಂದಿ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ. ಈ ಪೈಕಿ ಒಬ್ಬರಲ್ಲಿ ಮಾತ್ರ ಎಬೋಲಾ ಪಾಸಿಟಿವ್ ಕಂಡುಬಂದಿದೆ. ಸೋಂಕು ಹರಡುವಿಕೆ ತಡೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ಸಾರ್ವಜನಿಕರು ಆತಂಕಕ್ಕೊಳಗುವುದು ಬೇಡ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಕೀನ್ಯಾದಲ್ಲಿ ಹಿಂದೆಂದೂ ಎಬೊಲಾ ಪ್ರಕರಣಗಳು ವರದಿಯಾಗಿರಲಿಲ್ಲ. ಆದರೆ, ನೆರೆಯ ದೇಶಗಳಲ್ಲಿ ಸೋಂಕು ಹೆಚ್ಚಿದ್ದರಿಂದ ನೈರೋಬಿ ಬಳಿ ಎಬೋಲಾ ಚಿಕಿತ್ಸಾ ಕೇಂದ್ರ ಸ್ಥಾಪನೆಗೆ ಸರ್ಕಾರ ಮುಂದಾಗಿತ್ತು.
ಕಾಂಗೊದಲ್ಲಿ ಮೇ ತಿಂಗಳಲ್ಲಿ 17ನೇ ಎಬೋಲಾ ಪ್ರಕರಣ ದಾಖಲಾಗಿತ್ತು. 50 ವರ್ಷಗಳಿಂದ ಆಫ್ರಿಕಾದಲ್ಲಿ ಈ ಸೋಂಕಿನಿಂದ 15,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.
ಎಬೋಲಾ ವೈರಸ್‌ನ 'ಬುಂಡಿಬುಗ್ಯೊ' ರೂಪಾಂತರ ತಳಿ ಪತ್ತೆಯಾದ ಬಳಿಕ ಈ ಸೋಂಕಿಗೆ 8,463 ಜನರು ಒಳಗಾಗಿದ್ದು, ಈ ಪೈಕಿ 4,082 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಸೋಂಕಿನಿಂದ ಜನರ ರಕ್ಷಣೆಗೆ ನಿರ್ದಿಷ್ಟ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ ಎಂದು ಅದು ತಿಳಿಸಿದೆ.



