ಇಸ್ಲಾಮಾಬಾದ್: ಕೊಲ್ಲಿ ರಾಷ್ಟ್ರ ಸೌದಿ ಅರೇಬಿಯಾ ಮೇಲೆ ಹೂಥಿ ಬಂಡುಕೋರರ ದಾಳಿಗಳು ತೀವ್ರಗೊಂಡಿರುವ ಬೆನ್ನಲ್ಲೇ ಈ ಮೂರು ರಾಷ್ಟ್ರಗಳ ನಡುವಿನ ತ್ರಿಪಕ್ಷೀಯ ರಕ್ಷಣಾ ಒಪ್ಪಂದದ ಅನ್ವಯ ಸೌದಿಯಲ್ಲಿ ಸೇನಾ ಪಡೆಗಳನ್ನು ನಿಯೋಜಿಸಲು ಪಾಕಿಸ್ತಾನ ಮತ್ತು ಟರ್ಕಿ ಸಮ್ಮತಿಸಿವೆ.
ಸೌದಿ ಅರೇಬಿಯಾ ಎದುರಿಸುತ್ತಿರುವ ಭದ್ರತಾ ಸವಾಲುಗಳು ಮತ್ತು ಪ್ರಾದೇಶಿಕ ಬೆಳವಣಿಗೆಗಳ ಕುರಿತು ಚರ್ಚಿಸಲು 'ಮಕ್ಕಾ ಡಿಫೆನ್ಸ್ ಅಲಯನ್ಸ್'ನ ಕಾರ್ಯತಂತ್ರದ ರಾಜಕೀಯ ಮತ್ತು ರಕ್ಷಣಾ ಸಮಿತಿ (ಎಸ್‌ಪಿಡಿಸಿ) ಸೋಮವಾರ ರಿಯಾದ್‌ನಲ್ಲಿ ತುರ್ತು ಸಭೆ ನಡೆಸಿತು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಬಾಹ್ಯ ಬೆದರಿಕೆಗಳನ್ನು ಒಗ್ಗಟ್ಟಿನಿಂದ ಎದುರಿಸಲು ಬದ್ಧವಾಗಿರುವುದಾಗಿ ಸಮಿತಿ ಪುನರುಚ್ಚರಿಸಿದೆ. ಅಗತ್ಯ ಮಿಲಿಟರಿ ಬಲ ಒದಗಿಸಲು ಹಾಗೂ ಸೌದಿಯಲ್ಲಿ ತ್ವರಿತವಾಗಿ ಸೇನೆ ನಿಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಮಿತಿ ತೀರ್ಮಾನಿಸಿದೆ. ಆದರೆ, ಸೈನಿಕರ ನಿಯೋಜನೆ ಅಥವಾ ನಿಖರ ಸಂಖ್ಯೆಯ ವಿವರಗಳನ್ನು ಬಹಿರಂಗಪಡಿಸಿಲ್ಲ.
ಮೆಕ್ಕಾ ಮತ್ತು ಮದೀನಾಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿ ಯತ್ನಗಳು ಹಾಗೂ ಸೌದಿಯ ನಗರಗಳು, ನಾಗರಿಕ ಮತ್ತು ಆರ್ಥಿಕ ಮೂಲಸೌಕರ್ಯಗಳ ಮೇಲಿನ ನಿರಂತರ ದಾಳಿಗಳನ್ನು ಮೂರೂ ದೇಶಗಳು ತೀವ್ರವಾಗಿ ಖಂಡಿಸಿವೆ.
ಈ ಕುರಿತು 'ಜಿಯೋ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖ್ವಾಜಾ ಆಸಿಫ್, 'ಸೌದಿಯಲ್ಲಿ ಪಾಕಿಸ್ತಾನ ಮತ್ತು ಟರ್ಕಿ ಸೇನೆಯ ಉಪಸ್ಥಿತಿ ಇರಲಿದೆಯಾದರೂ, ಪ್ರತ್ಯಕ್ಷ ಕದನ ಕಾರ್ಯಾಚರಣೆಗಳಲ್ಲಿ ಕೇವಲ ಸೌದಿ ಸೈನಿಕರು ಮಾತ್ರ ಭಾಗವಹಿಸಲಿದ್ದಾರೆ. ಸೌದಿಗೆ ಅಗತ್ಯವಿರುವ ಬೆಂಬಲವನ್ನು ನೀಡಲಾಗುತ್ತಿದ್ದು, ಸದ್ಯ ಟರ್ಕಿ ಮತ್ತು ಪಾಕ್ ಪಡೆಗಳು ಕಣ್ಗಾವಲು ಹಾಗೂ ಬೆಂಬಲಿತ ಪಾತ್ರವನ್ನು ಮಾತ್ರ ವಹಿಸಲಿವೆ' ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಜಗತ್ತಿನ ಮೂರು ಪ್ರಮುಖ ಮುಸ್ಲಿಂ ರಾಷ್ಟ್ರಗಳ ನಡುವೆ ಸೇನಾ ಒಪ್ಪಂದವೊಂದು ಏರ್ಪಟ್ಟಿತ್ತು. ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಟರ್ಕಿ ದೇಶಗಳು ಜಂಟಿ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿವೆ. ರಕ್ಷಣೆಯ ವಿಚಾರದಲ್ಲಿ ಮೂರು ರಾಷ್ಟ್ರಗಳು ಒಗ್ಗಟ್ಟಿನಿಂದ ಕೆಲಸ ಮಾಡಲಿದ್ದು, ಒಂದು ರಾಷ್ಟ್ರದ ಮೇಲಿನ ದಾಳಿಯನ್ನು ಮೂರೂ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿತ್ತು.



