ನವದೆಹಲಿ: ಸೋಮವಾರ ಸರ್ವೋಚ್ಚ ನ್ಯಾಯಾಲಯದ ಆವರಣದಲ್ಲಿ ಎಸ್‌ಐಆರ್ ಮತ್ತು ಸಿಇಸಿ ಜ್ಞಾನೇಶ್ ಕುಮಾರ ವಿರುದ್ಧ ಪ್ರತಿಪಕ್ಷಗಳ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ತನ್ನ ಕೈಯನ್ನು ಆಕ್ರಮಣಕಾರಿಯಾಗಿ ಎಳೆದು ತಳ್ಳಿದ್ದರು ಎಂದು ಮೂರು ತಿಂಗಳ ಗರ್ಭಿಣಿಯಾಗಿರುವ ಪತ್ರಕರ್ತೆಯೋರ್ವರು ಆರೋಪಿಸಿದ್ದಾರೆ.
ಆದರೆ ಈ ರೀತಿಯ ಯಾವುದೇ ಘಟನೆ ನಡೆದಿರುವುದನ್ನು ನಿರಾಕರಿಸಿರುವ ಕಾಂಗ್ರೆಸ್, ಇದು ಬಿಜೆಪಿಯು ಸೃಷ್ಟಿಸಿದ ರಾಜಕೀಯ ಪ್ರಚಾರ ತಂತ್ರ ಎಂದು ಬಣ್ಣಿಸಿದೆ.
ಒನ್‌ಇಂಡಿಯಾ ಸುದ್ದಿ ಜಾಲತಾಣದ ಪತ್ರಕರ್ತೆ ರಿಚಾ ಪರಾಶರ್ ಈ ಹಲ್ಲೆ ಆರೋಪ ಮಾಡಿದ್ದು, ದಿಲ್ಲಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದಾರೆ. ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ರಾಹುಲ್ ಬೆಂಬಲಿಗರು ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಮತ್ತು ತಾನು ಅನುಭವಿಸಿದ ಕಷ್ಟವನ್ನು ಕಡೆಗಣಿಸುತ್ತಿದ್ದಾರೆ ಎಂದು ದೂರಿದರು.
'ಇದು ಕಾಂಗ್ರೆಸ್ ಅಥವಾ ಬಿಜೆಪಿ ಕುರಿತಲ್ಲ. ನಾನು ನನ್ನ ಕರ್ತವ್ಯ ನಿರ್ವಹಿಸುತ್ತಿರುವ ಸಾಮಾನ್ಯ ಪ್ರಜೆಯಷ್ಟೇ. ಕೆಲವರು ಆಡುತ್ತಿರುವ ಮಾತುಗಳು ಅತ್ಯಂತ ದುರದೃಷ್ಟಕರ' ಎಂದು ಅವರು ಹೇಳಿದರು. ತನ್ನ ಯೋಗಕ್ಷೇಮವನ್ನು ವಿಚಾರಿಸಲು ಬಿಜೆಪಿ ನಾಯಕರಿಂದ ಆಸ್ಪತ್ರೆಗೆ ಭೇಟಿ ನಡುವೆಯೇ ಮಾತನಾಡಿದ ಪತ್ರಕರ್ತೆ, ತಾನು ಸಂದರ್ಶನಕ್ಕಾಗಿ ರಾಹುಲ್ ಮುಂದೆ ಮೈಕ್ ಹಿಡಿದಿದ್ದೆ. ಅಸಮಾಧಾನಗೊಂಡ ಅವರು ತನ್ನ ಕೈಯನ್ನು ಬಲವಾಗಿ ಹಿಡಿದು ಎಳೆದ ಪರಿಣಾಮ ತಾನು ನೆಲಕ್ಕೆ ಬಿದ್ದು, ಮಂಡಿ ಹಾಗೂ ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ಕ್ಯಾಮೆರಾ ಮುಂದೆ ಆರೋಪಿಸಿದರು.
ಪ್ರತಿಭಟನೆಯ ನೂಕುನುಗ್ಗಲು ಹಾಗೂ ಗದ್ದಲದ ಮಧ್ಯೆ ರಾಹುಲ್ ತನ್ನ ಕ್ಯಾಮೆರಾಮನ್‌ನನ್ನೂ ತಳ್ಳಿದ್ದರು. ಪರಿಣಾಮವಾಗಿ ಅವರು ಮತ್ತು ಅವರ ಹಿಂದೆ ಇದ್ದ ನಾಲ್ಕೈದು ಜನರೂ ತನ್ನ ಮೇಲೆ ಬಿದ್ದಿದ್ದರು ಎಂದು ಪತ್ರಕರ್ತೆ ದೂರಿದರು.
ಈ ಘಟನೆಯ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಅವರು ಹೇಳಿಕೊಂಡಿರುವ ಘಟನೆಯ ಯಾವುದೇ ಸ್ಪಷ್ಟ ದೃಶ್ಯಗಳಿಲ್ಲ ಎಂದು ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರು ಪ್ರತಿಪಾದಿಸಿದ್ದಾರೆ.



