ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ತಪ್ಪಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿ ಹಂಚಿಕೊಂಡಿದ್ದ ಸಾಮಾಜಿಕ ಜಾಲತಾಣದ ಪೋಸ್ಟ್ ಅನ್ನು ದಿಲ್ಲಿ ಪೊಲೀಸರು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಡಿಲೀಟ್ ಮಾಡಿದ್ದಾರೆ. ರಾಜಕೀಯ ಒತ್ತಡದ ಕಾರಣಕ್ಕೆ ಈ ಪೋಸ್ಟ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ಫ್ಯಾಕ್ಟ್-ಚೆಕರ್ ಮೊಹಮ್ಮದ್ ಝುಬೇರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಈ ಬಗ್ಗೆ ಭವಿಷ್ಯ ಹೇಳಿದ್ದರು.
ಅಕ್ಟೋಬರ್ 25 ರಂದು ದಿಲ್ಲಿ ಪೊಲೀಸರ ಅಧಿಕೃತ 'X' (ಹಿಂದಿನ ಟ್ವಿಟರ್) ಖಾತೆಯಲ್ಲಿ ಹಸಿರು ದೀಪಾವಳಿ ಆಚರಿಸಲು ಹಾಗೂ ಪಟಾಕಿಗಳ ಸದ್ದಿನಿಂದ ಪ್ರಾಣಿಗಳಿಗೆ ಉಂಟಾಗುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಜಾಗೃತಿ ಮೂಡಿಸುವ ಸಂದೇಶವೊಂದನ್ನು ಪ್ರಕಟಿಸಲಾಗಿತ್ತು. ಆದರೆ, ಅದೇ ದಿನ ಸಂಜೆಯ ವೇಳೆಗೆ ಆ ಪೋಸ್ಟ್ ಕಾಣೆಯಾಗಿದ್ದು, ಇಲಾಖೆಯು ತನ್ನದೇ ಸಾರ್ವಜನಿಕ ಜಾಗೃತಿ ಸಂದೇಶವನ್ನು ಏಕೆ ಹಿಂಪಡೆಯಿತು ಎಂಬ ಪ್ರಶ್ನೆಗಳು ಎದ್ದಿವೆ.
ಪೋಸ್ಟ್ ಡಿಲೀಟ್ ಆದ ಬೆನ್ನಲ್ಲೇ ಈ ಕುರಿತು 'X' ನಲ್ಲಿ ಪ್ರತಿಕ್ರಿಯಿಸಿದ ಝುಬೇರ್, "ಕೇವಲ ಐದು ಗಂಟೆಗಳೊಳಗೆ ದಿಲ್ಲಿ ಪೊಲೀಸರು 'ಪಟಾಕಿಗಳಿಗೆ ನೋ ಎನ್ನಿ' ಎಂಬ ಟ್ವೀಟ್ ಅನ್ನು ಅಳಿಸಿಹಾಕಿದ್ದಾರೆ. ಬಹುತೇಕ ಎಲ್ಲರೂ ಇದು ನಡೆಯಲಿದೆ ಎಂದು ಮೊದಲೇ ಊಹಿಸಿದ್ದರು," ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಕೇಂದ್ರ ಗೃಹ ಸಚಿವಾಲಯ ಅಥವಾ ದಿಲ್ಲಿ ಸರ್ಕಾರದ ಒತ್ತಡದಿಂದ ಈ ಕ್ರಮ ಕೈಗೊಳ್ಳಲಾಗಿದೆಯೇ ಎಂದೂ ಅವರು ಪ್ರಶ್ನಿಸಿದ್ದಾರೆ.
ಇದಕ್ಕೂ ಮೊದಲು, ಪೋಸ್ಟ್ ತೆಗೆದುಹಾಕುವ ಸಾಧ್ಯತೆಯನ್ನು ಊಹಿಸಿದ್ದ ಝುಬೇರ್, "ರಾಜಕೀಯ ಒತ್ತಡದ ಕಾರಣ ಈ ಟ್ವೀಟ್ ಶೀಘ್ರದಲ್ಲೇ ಡಿಲೀಟ್ ಆಗಲಿದೆ," ಎಂದು ಪೋಸ್ಟ್ ಮಾಡಿದ್ದರು. ನಂತರ ಡಿಲೀಟ್ ಆದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗ ಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ದಿಲ್ಲಿ ಪೊಲೀಸರು ಹಂಚಿಕೊಂಡಿದ್ದ ಮೂಲ ಪೋಸ್ಟ್ ನಲ್ಲಿ, "ಈ ಹಬ್ಬದ ಋತುವಿನಲ್ಲಿ ಬಾಲಗಳು ಅಂಜಿಕೆಯಿಂದ ಅಡಗಿಕೊಳ್ಳದೆ, ಸಂತೋಷದಿಂದ ಅಲ್ಲಾಡಲಿ. ಪಟಾಕಿಗಳಿಗೆ ನೋ ಎನ್ನಿ, ಹಸಿರು ದೀಪಾವಳಿಗೆ ಯೆಸ್ ಎನ್ನಿ" ಎಂಬ ಸಂದೇಶವಿತ್ತು. ಹಬ್ಬದ ವೇಳೆ ಅತಿಯಾದ ಪಟಾಕಿ ಸದ್ದು ಸಾಕುಪ್ರಾಣಿಗಳು ಸೇರಿದಂತೆ ಮೂಕಪ್ರಾಣಿಗಳಿಗೆ ಎಷ್ಟು ನೋವು ತರುತ್ತದೆ ಎಂಬುದನ್ನು ಬಿಂಬಿಸುವ ಚಿತ್ರಗಳನ್ನು ಅದರಲ್ಲಿ ಬಳಸಲಾಗಿತ್ತು.
ಪಟಾಕಿಗಳ ಅಬ್ಬರ ಮತ್ತು ಬೆಳಕಿನಿಂದ ಪ್ರಾಣಿಗಳು ಹೇಗೆ ಭಯಭೀತರಾಗುತ್ತವೆ ಎಂಬುದನ್ನು ವಿವರಿಸಲು ಬೆಕ್ಕುಗಳ ಚಿತ್ರಗಳಿದ್ದ ಆ ಪೋಸ್ಟ್‌ಗಳಲ್ಲಿ "ಜೋರಾದ ಪಟಾಕಿಗಳು, ಹೆದರಿದ ಪಂಜಗಳು" ಎಂಬ ಸಾಲುಗಳೊಂದಿಗೆ ಪಟಾಕಿ ಸಿಡಿಸದಂತೆ ಮನವಿ ಮಾಡಲಾಗಿತ್ತು.
ಈ ಪೋಸ್ಟ್ ಅಳಿಸಿಹೋದ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಜನರು ಈ ಬಗ್ಗೆ ತೀವ್ರ ಚರ್ಚೆ ನಡೆಸಿದರು. ಕೆಲವರು ಝುಬೇರ್ ಅವರ ಹಿಂದಿನ ಭವಿಷ್ಯವನ್ನು ಉಲ್ಲೇಖಿಸಿದರೆ, ಇನ್ನು ಕೆಲವರು ಅಳಿಸಿಹೋದ ಪೋಸ್ಟ್ ನ ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಳ್ಳುವಂತೆ ಕೋರಿದರು.
ಆದರೆ, ದಿಲ್ಲಿ ಪೊಲೀಸರಿಗೆ ಕೇಂದ್ರ ಗೃಹ ಸಚಿವಾಲಯದಿಂದಾಗಲಿ ಅಥವಾ ದಿಲ್ಲಿ ಸರ್ಕಾರದಿಂದಾಗಲಿ ಯಾವುದೇ ನಿರ್ದೇಶನಗಳು ಬಂದಿವೆಯೇ ಅಥವಾ ವಾಸ್ತವವಾಗಿ ರಾಜಕೀಯ ಒತ್ತಡ ಹೇರಲಾಗಿದೆಯೇ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಪ್ರಾಣಿ ಸ್ನೇಹಿ ಮತ್ತು ಶಬ್ದರಹಿತ ದೀಪಾವಳಿಗಾಗಿ ಪೊಲೀಸ್ ಇಲಾಖೆ ಮೊದಲು ಸಾರ್ವಜನಿಕ ಮನವಿ ಸಲ್ಲಿಸಿ, ಬಳಿಕ ಅದನ್ನು ಹಿಂಪಡೆದಿರುವುದು ಹಲವರ ಹುಬ್ಬೇರಿಸಿದೆ. ಈ ಪೋಸ್ಟ್ ಅನ್ನು ಏಕೆ ತೆಗೆದುಹಾಕಲಾಯಿತು ಎಂಬುದಕ್ಕೆ ದಿಲ್ಲಿ ಪೊಲೀಸರು ಈವರೆಗೆ ಯಾವುದೇ ಸಾರ್ವಜನಿಕ ಸ್ಪಷ್ಟನೆ ನೀಡಿಲ್ಲ. ಹೀಗಾಗಿ, ಈ ನಿರ್ಧಾರದ ಹಿಂದಿನ ನಿಖರ ಕಾರಣ ಇನ್ನೂ ಅಸ್ಪಷ್ಟವಾಗಿಯೇ ಉಳಿದಿದೆ.


