HEALTH TIPS

"ಚುನಾವಣಾ ಆಯೋಗ ನನ್ನಿಂದ ಸುಳ್ಳು ಘೋಷಣೆ ಬಯಸುತ್ತಿದೆ": ಕೋರ್ಟ್ ಮೊರೆ ಹೋದ ಗೋವಾ ಮತದಾರ

ಪಣಜಿ: ಉತ್ತರ ಗೋವಾದ ಸಾಂತಾಕ್ರೂಜ್ ನಿವಾಸಿ ಪರೇಶ್ ಸಾಲಗಾಂವ್ಕರ್(41) ಚುನಾವಣಾ ಆಯೋಗದ (ಇಸಿಐ) ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ವಿರುದ್ಧ ಮುಂಬೈ ಉಚ್ಚ ನ್ಯಾಯಾಲಯದ ಗೋವಾ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಿಯಮಗಳನ್ನು ಅಮಾನತುಗೊಳಿಸಿರುವ ರೀತಿಯನ್ನು ಕಂಡು ತನಗೆ ಆತಂಕವಾಗಿದೆ ಎಂದಿರುವ ಹೈಕೋರ್ಟ್, ಕೋರ್ಟ್‌ಗೆ ಬಾರದ ಇಂತಹ ಇನ್ನೆಷ್ಟು ಜನರಿದ್ದಾರೋ ಎಂದು ಕಳವಳವನ್ನು ವ್ಯಕ್ತಪಡಿಸಿದೆ.  


ಅರ್ಹ ಮತದಾರರು ಹೊರಗುಳಿಯದಂತೆ ನೋಡಿಕೊಳ್ಳಲು ಇಸಿಐಗೆ ಅದು ಸೂಚಿಸಿದೆ ಎಂದು indianexpress.com ವರದಿ ಮಾಡಿದೆ.

ಚುನಾವಣಾ ಆಯೋಗವು ತನ್ನಿಂದ ಬಯಸುತ್ತಿರುವ ಸುಳ್ಳು ಘೋಷಣೆಗೆ ಒಪ್ಪದ ಸಾಲಗಾಂವ್ಕರ್, ಇತರ ಅನೇಕ ಮತದಾರರಿಗೂ ಇದೇ ಸಮಸ್ಯೆಯಾಗಿರಬಹುದು ಎಂಬ ಕಾರಣಕ್ಕೆ ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ.

ಎಂಟು ವರ್ಷಗಳ ಹಿಂದೆ ಅದೇ ಕ್ಷೇತ್ರದಲ್ಲಿ ವಾಸಸ್ಥಳ ಬದಲಾಯಿಸಿದ್ದ ಸಾಲಗಾಂವ್ಕರ್ ಕುಟುಂಬದ ಆರು ಸದಸ್ಯರ ಹೆಸರುಗಳು ಅಂತಿಮ ಮತದಾರರ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿವೆ. 2003ರಿಂದಲೂ ವಿವಿಧ ಚುನಾವಣೆಗಳಲ್ಲಿ ಮತ ಚಲಾಯಿಸಿರುವ ಅವರು, ಬಿಎಲ್‌ಒ ಸೂಚನೆಯಂತೆ 2025ರ ನವೆಂಬರ್‌ನಲ್ಲಿ ವಿಳಾಸ ಬದಲಾವಣೆಗೆ ಫಾರ್ಮ್ 8ರಲ್ಲಿ ಅರ್ಜಿ ಸಲ್ಲಿಸಿದ್ದರು. ತಾನು ಅವರ ಅರ್ಜಿಯನ್ನು ಡಿಸೆಂಬರ್ 8ರಂದು ಇಸಿಐ ಆನ್‌ಲೈನ್ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಿದ್ದಾಗಿ ಬಿಎಲ್‌ಒ ತಿಳಿಸಿದ್ದರು. ಚುನಾವಣಾ ಆಯೋಗದಿಂದ ಸ್ವೀಕೃತಿ ಪತ್ರವನ್ನೂ ಸಾಲಗಾಂವ್ಕರ್ ಸ್ವೀಕರಿಸಿದ್ದರು. ಆದರೆ, ಡಿಸೆಂಬರ್ 16ರಂದು ಪ್ರಕಟಗೊಂಡ ಮತದಾರರ ಕರಡು ಪಟ್ಟಿಯಲ್ಲಿ ಅವರ ಮತ್ತು ಕುಟುಂಬದ ಹೆಸರುಗಳಿರಲಿಲ್ಲ. ವಿಚಾರಿಸಿದಾಗ,ಅಂತಿಮ ಪಟ್ಟಿಯಲ್ಲಿ ಹೆಸರುಗಳು ಸೇರ್ಪಡೆಯಾಗಲಿವೆ ಎಂದು ಬಿಎಲ್‌ಒಗಳು ಭರವಸೆ ನೀಡಿದ್ದರು.

ಆದರೆ ಜನವರಿ 31ರಂದು, ಹಕ್ಕುಗಳು ಮತ್ತು ಆಕ್ಷೇಪಣೆಗಳ ಸಲ್ಲಿಕೆ ಅವಧಿ ಮುಗಿದ ಬಳಿಕ ಇಸಿಐ ತಂತ್ರಾಂಶವು ಅವರ ಅಳಿಸಲಾದ ಎಪಿಕ್ ಕಾರ್ಡ್‌ಗಳನ್ನು ಮರಳಿ ಪಡೆಯಲು ಸಾಧ್ಯವಾಗದ ಕಾರಣ 'ಫಾರ್ಮ್ 8' ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಸಾಲಗಾಂವ್ಕರ್‌ಗೆ ತಿಳಿಸಲಾಗಿತ್ತು. ವಾಸಸ್ಥಳ ಬದಲಾಯಿಸಿದ್ದರಿಂದ ಅವರ ಹೆಸರುಗಳನ್ನು ಗೈರುಹಾಜರಿ, ಸ್ಥಳಾಂತರ, ನಕಲಿ, ಮೃತ (ಎಎಸ್‌ಡಿಡಿ) ಪಟ್ಟಿಗೆ ಸೇರಿಸಿ ರದ್ದುಗೊಳಿಸಲಾಗಿತ್ತು. ಇಸಿಐ ಅಧಿಕಾರಿಗಳು ಅವರಿಗೆ ಹೊಸ ಮತದಾರರಿಗೆ ನೀಡುವ 'ಫಾರ್ಮ್ 6' ಸಲ್ಲಿಸುವಂತೆ ಸೂಚಿಸಿದರು. ಆದರೆ, ಸಾಲಗಾಂವ್ಕರ್ ಅವರು ತಾನು ಮತ್ತು ತನ್ನ ಕುಟುಂಬ ಮೊದಲ ಬಾರಿಗೆ ಮತ ಚಲಾಯಿಸುತ್ತಿಲ್ಲವಾದ್ದರಿಂದ ಫಾರ್ಮ್ 6ರಲ್ಲಿ ಸುಳ್ಳು ಪ್ರಮಾಣೀಕರಣವು ತಮ್ಮ ನೈತಿಕತೆಗೆ ವಿರುದ್ಧ ಎಂದು ನಿರಾಕರಿಸಿದರು.

ಫೆಬ್ರವರಿ 2026ರ ಅಂತಿಮ ಪಟ್ಟಿಯಲ್ಲೂ ಹೆಸರುಗಳು ಇಲ್ಲದಿದ್ದಾಗ, ಅವರು ಮೇಲ್ಮನವಿ ಸಲ್ಲಿಸಿದರು. ಎಣಿಕೆ ಹಂತದಲ್ಲಿ ವಿಳಾಸ ಬದಲಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂಬ ಉತ್ತರ ಅಧಿಕಾರಿಗಳಿಂದ ಬಂದಿತ್ತು.

ವ್ಯವಸ್ಥೆಯ ತಾಂತ್ರಿಕ ದೋಷಕ್ಕೆ ನಾಗರಿಕರಿಗೆ ಶಿಕ್ಷೆ ನೀಡುವುದು ಸರಿಯಲ್ಲ. ಯಾವುದೇ ನೋಟಿಸ್ ಅಥವಾ ವಿಚಾರಣೆ ಇಲ್ಲದೆ ಹೆಸರು ತೆಗೆದುಹಾಕುವುದು ನೈಸರ್ಗಿಕ ನ್ಯಾಯದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸಾಲಗಾಂವ್ಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಂತಿಮವಾಗಿ ಮೇ ತಿಂಗಳಿನಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಸಾಲಗಾಂವ್ಕರ್, 'ಹೊಸ ಮತದಾರನಾಗಿ ಫಾರ್ಮ್ 6ರಲ್ಲಿ ಅರ್ಜಿ ಸಲ್ಲಿಸುವಂತೆ ಅವರು ನನಗೆ ಸೂಚಿಸಿದ್ದಾರೆ. ಆದರೆ ನಾನು ಹೊಸ ಮತದಾರನಲ್ಲ ಮತ್ತು ಇದು ನಂತರ ಸಂಘರ್ಷಕ್ಕೆ ಕಾರಣವಾಗುತ್ತದೆ. ನನ್ನನ್ನು ಹೊಸ ಮತದಾರನೆಂದು ತೋರಿಸಿದರೆ, ಭವಿಷ್ಯದಲ್ಲಿ ಸರಕಾರವು ಮತದಾನ ನೋಂದಣಿ ವಿವರಗಳ ಆಧಾರದ ಮೇಲೆ ಪೌರತ್ವ ಅಥವಾ ಯೋಜನೆಗಳ ಪ್ರಯೋಜನಗಳನ್ನು ನಿರ್ಧರಿಸಿದರೆ ನನ್ನ ಹಿಂದಿನ ಮತದಾನದ ಇತಿಹಾಸವೇ ಇಲ್ಲದಂತಾಗುತ್ತದೆ' ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries