ಮುಂಬೈ: ಮುಖ್ಯ ಚುನವಾಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ, ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ನಾಯಕ ಅಭಿಜಿತ್ ದೀಪ್ಕೆ ಶುಕ್ರವಾರ ರಾತ್ರಿ ಘೋಷಿಸಿದ್ದಾರೆ.
'ಒಂದು ವೇಳೆ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡದಿದ್ದರೆ, ದೇಶದಾದ್ಯಂತ ಕಾಕ್ರೋಚ್‌ಗಳು ದೆಹಲಿಗೆ ತೆರಳಿ, ಅಕ್ಟೋಬರ್ 10 ರಂದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿವೆ' ಎಂದು ಅವರು 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅದು ಶಾಂತಿಯುತ ಪ್ರತಿಭಟನೆಯಾಗಿದ್ದು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಬಯಸುವ ಪ್ರತಿಯೊಬ್ಬ ಪೌರನೂ ಭಾಗಿಯಾಗಬೇಕು ಎಂದು ಕರೆಕೊಟ್ಟಿದ್ದಾರೆ.
'ಒಂದು ವೇಳೆ ದೆಹಲಿ ಪೊಲೀಸರು ನಮ್ಮನ್ನು ತಡೆಯಲು ಯತ್ನಿಸಿದರೆ, ಅವರು ತಡೆದ ಸ್ಥಳವೇ ಜಂತರ್ ಮಂತರ್ ಆಗಲಿದೆ' ಎಂದು ಅವರು ಹೇಳಿದ್ದಾರೆ.
'ನಮ್ಮದು ಶಾಂತಿಯುತ ಆಂದೋಲನವಾಗಿರಲಿದೆ. ನಾವು ಮಹಾತ್ಮ ಗಾಂಧಿ ತೋರಿಸಿಕೊಟ್ಟ ದಾರಿಯಲ್ಲಿ ಸಾಗಲಿದ್ದೇವೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಗೌರವಿಸುವುದು ಅಥವಾ ಜುಲೈ 20ರ ಹಾಗೆ ಕ್ರೌರ್ಯದಿಂದ ವರ್ತಿಸುತ್ತಾರೆಯೇ ಎನ್ನುವುದು ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರಿಗೆ ಬಿಟ್ಟಿದ್ದು' ಎಂದಿದ್ದಾರೆ.
ಶುಕ್ರವಾರ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಜ್ಞಾನೇಶ್ ಕುಮಾರ್ ವಿರುದ್ಧ ಘೋಷಣೆ ಕೂಗಿ, ರಾಜೀನಾಮೆಗೆ ಆಗ್ರಹಿಸಿದರು.
ಆ ಸಭೆಯಲ್ಲಿ ಮಾತಮಾಡಿದ್ದ ದೀಪ್ಕೆ, ಜ್ಞಾನೇಶ್ ಕುಮಾರ್ ಕೆಳಗಿಳಿಯದಿದ್ದರೆ, 'ಜಂತರ್ ಮಂತರ್ 2.O' ನಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದರು.
Copy link

